ಬೆಂಗಳೂರು: ಕನ್ನಡ ಜಾನಪದ ಪರಿಷತ್ ವತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದಲ್ಲಿ ಇದೇ 30 ರಂದು ನಡೆಯಲಿರುವ ಜಿಲ್ಲಾ ಪ್ರಥಮ ಕನ್ನಡ ಜಾನಪದ ಮಹಿಳಾ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧುರಿ ಅವರು ಬಿಡುಗಡೆಗೊಳಿಸಿದರು.
ಜಾನಪದ ವಿದ್ವಾಂಸರೂ, ಸಾಹಿತಿಯೂ ಆದ ಡಾ. ಮಂಜುಳಾ ಹುಲಹಳ್ಳಿ ಅವರ ಸರ್ವಾಧ್ಯಕ್ಷತೆಯಲ್ಲಿ ಇದೇ ತಿಂಗಳ 30 ರಂದು ಅಜ್ಜಂಪುರದಲ್ಲಿ ಮಹಿಳಾ ಕನ್ನಡ ಜಾನಪದ ಸಮ್ಮೇಳನ ನಡೆಯಲಿದೆ.
ಇದರ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿದ ಡಾ. ನಾಗಲಕ್ಷ್ಮಿ ಚೌಧುರಿ ಅವರು ಮಾತನಾಡಿ, ಮಹಿಳಾ ಜಾನಪದ ಸಬಲೀಕರಣದ ಅಗತ್ಯತೆ ಇದೆ ಎಂದು ಒತ್ತಿ ಹೇಳಿದರು.
ಜಾನಪದ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದ್ದು, ಜಾನಪದ ಸಂರಕ್ಷಣೆ ಮತ್ತು ಪ್ರಸಾರ ಕಾರ್ಯದಲ್ಲಿ ಅವರ ಪಾತ್ರ ಅತ್ಯಂತ ಮಹತ್ತರವಾಗಿದೆ. ಇಂತಹ ಸಮ್ಮೇಳನಗಳು ಜಾನಪದ ಕುರಿತು ಮತ್ತಷ್ಟು ಜಾಗೃತಿ ಮೂಡಿಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಎಸ್. ಬಾಲಾಜಿ, ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾದ ಕೆ.ಸಿ. ಕಾಂತಪ್ಪ, ಜಿಬಿಎ ಕನ್ನಡ ಜಾನಪದ ಪರಿಷತ್ ಪಶ್ಚಿಮ ವಲಯ ಅಧ್ಯಕ್ಷರಾದ ರ. ನರಸಿಂಹಮೂರ್ತಿ ಹಾಗೂ ಮಹಿಳಾ ಮುಖಂಡರು ಉಪಸ್ಥಿತರಿದ್ದರು.
