ದೋಹಾ: ಕತಾರ್ನ ರಾಸ್ ಲಫಾನ್ ನಲ್ಲಿರುವ ಅನಿಲ ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಭಾರತ, ಪಾಕ್ ಸೇರಿದಂತೆ 13 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಈ ಅವಘಡದಲ್ಲಿ 66 ಮಂದಿ ಗಾಯಗೊಂಡಿದ್ದಾರೆ.
ಮಾರ್ಚ್ ತಿಂಗಳಲ್ಲಿ ಇರಾನ್ ದಾಳಿಯ ಬಳಿಕ ಸ್ಥಗಿತಗೊಂಡಿದ್ದ ಕಾರ್ಯಾಚರಣೆಯನ್ನು ಮರುಪ್ರಾರಂಭಿಸಿದ ವೇಳೆ ಈ ಸ್ಫೋಟ ಸಂಭವಿಸಿದೆ.
ಗಾಯಗೊಂಡಿದ್ದವರೆಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಯಾರ ಜೀವಕ್ಕೂ ಸದ್ಯ ಅಪಾಯ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಸಂಜೆ ಘಟಕದಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು,ಬಹುಶಃ ಅದೇ ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಈ ಅವಘಡದಿಂದ ಘಟಕದ ಅನಿಲ ರಫ್ತು ಚಟುವಟಿಕೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದೊಂದು ಅಪಘಾತವಷ್ಟೆ, ಯಾವುದೇ ವಿಧ್ವಂಸಕ ಕೃತ್ಯ ಅಥವಾ ದಾಳಿಯ ಪರಿಣಾಮವಲ್ಲ ಎಂದು ಕತಾರ್ ಇಂಧನ ಸಚಿವರು ತಿಳಿಸಿದ್ದಾರೆ.
ಬರ್ಜಾನ್ ಅನಿಲ ಘಟಕವು ದಿನಕ್ಕೆ ಸುಮಾರು 1.4 ಬಿಲಿಯನ್ ಘನ ಅಡಿ ಅನಿಲ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಅನಿಲವನ್ನು ಕತಾರ್ ದೇಶದಲ್ಲಿ ವಿದ್ಯುತ್ ಉತ್ಪಾದನೆ ಹಾಗೂ ಸಮುದ್ರದ ನೀರನ್ನು ಶುದ್ಧೀಕರಿಸುವ ಘಟಕಗಳಲ್ಲಿ ಬಳಸಲಾಗುತ್ತದೆ.
