ಲೆಬನಾನ್: ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಕದನ ವಿರಾಮ ಜಾರಿಯಾದ 24 ಗಂಟೆಗಳಲ್ಲೇ ಲೆಬನಾನ್ನಲ್ಲಿ ಇಸ್ರೇಲ್ ಸರಣಿ ದಾಳಿ ನಡೆಸಿದ್ದು,ಈ ವೈಮಾನಿಕ ದಾಳಿಗಳಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ.
ಶನಿವಾರ ಮುಂಜಾನೆ ದಕ್ಷಿಣ ಲೆಬನಾನ್ನ ವಿವಿಧ ಪ್ರದೇಶಗಳ ಮೇಲೆ ಇಸ್ರೇಲ್ 12ಕ್ಕೂ ಹೆಚ್ಚು ವೈಮಾನಿಕ ದಾಳಿಗಳನ್ನು ನಡೆಸಿದ್ದು
ಇದರಿಂದಾಗಿ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿದೆ.
ಇತ್ತೀಚಿನ ದಿನಗಳಲ್ಲಿ ಸಂಘರ್ಷದ ಕೇಂದ್ರಬಿಂದುವಾಗಿದ್ದ ನಬಾತಿಯೆ ಪ್ರದೇಶದ ಸುತ್ತಮುತ್ತಲಿನ ಭಾಗಗಳು ದಾಳಿಗೆ ಗುರಿಯಾಗಿವೆ
ನಬಾತಿಯೆ ನಗರ ಮತ್ತು ಅದರ ಹೊರವಲಯಗಳ ಮೇಲೆ ಇಸ್ರೇಲ್ ಫಿರಂಗಿ ದಾಳಿಯನ್ನೂ ನಡೆಸಿದೆ ಎಂದು ಹೇಳಲಾಗುತ್ತಿದೆ.
ಅರಬ್ ಸಲಿಮ್ ಪಟ್ಟಣದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದರೆ, ಡೀರ್ ಜಹ್ರಾನಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಜೊತೆಗೆ, ಡ್ವೇರ್ ಪಟ್ಟಣದ ಪ್ರವೇಶದ್ವಾರದಲ್ಲಿ ಬೈಕ್ ಮೇಲೆ ಸಾಗುತ್ತಿದ್ದ ವ್ಯಕ್ತಿಯ ಮೇಲೆ ಇಸ್ರೇಲಿ ಡ್ರೋನ್ ದಾಳಿ ನಡೆಸಿದ್ದು, ಮತ್ತೊಬ್ಬರು ಮೃತಪಟ್ಟಿದ್ದಾರೆ.ಒಟ್ಟಾರೆ 11 ಮಂದಿ ಸಾವನ್ನಪ್ಪಿದ್ದಾರೆ.
ಶುಕ್ರವಾರ ಅಮೆರಿಕ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಹಾಗೂ ಇರಾನ್ ಬೆಂಬಲಿತ ಹಿಜ್ಬುಲ್ಲಾ ನಡುವೆ ತಕ್ಷಣದ ಕದನ ವಿರಾಮ ಒಪ್ಪಂದಕ್ಕೆ ಬರಲಾಗಿತ್ತು.
ಅಮೆರಿಕದಲ್ಲಿನ ಇಸ್ರೇಲ್ ರಾಯಭಾರಿಯೂ, ಹಿಜ್ಬುಲ್ಲಾ ಕದನ ವಿರಾಮವನ್ನು ಗೌರವಿಸಿದರೆ ಇಸ್ರೇಲ್ ಕೂಡ ಅದನ್ನು ಪಾಲಿಸುತ್ತದೆ ಎಂದು ಹೇಳಿದ್ದರು. ಆದರೆ, ಹಿಂದಿನ ಕದನ ವಿರಾಮಗಳಂತೆ ಈ ಬಾರಿಯೂ ದಾಳಿಗಳು ನಿಲ್ಲದಿರುವುದು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದೆ.
