ಬೆಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದು ದೇಶದಲ್ಲಿ
ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆ ಮಾಡುವಂತೆ ಆಮ್ ಆದ್ಮಿ ಪಕ್ಷ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಬ್ಯಾರೆಲ್ಗೆ ಸುಮಾರು 110 ಡಾಲರ್ ಇದ್ದಾಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಲಾಗಿತ್ತು. ಆದರೆ ಈಗ ಕಚ್ಚಾ ತೈಲದ ಬೆಲೆ ಸುಮಾರು 75 ಡಾಲರ್ಗೆ ಇಳಿದಿದ್ದರೂ ದೇಶದ ಜನತೆ ಇನ್ನೂ ಹೆಚ್ಚಿನ ಇಂಧನ ದರದ ಹೊರೆಯನ್ನು ಹೊರುತ್ತಿದ್ದಾರೆ ಎಂದು ಆಪ್ ಬೇಸರ ವ್ಯಕ್ತಪಡಿಸಿದೆ.
ಕೂಡಲೇ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ತಗ್ಗಿಸಬೇಕೆಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರವು ಕಚ್ಚಾ ತೈಲದ ಳಬೆಲೆ ಏರಿಕೆಯನ್ನು ನೆಪವಾಗಿಸಿಕೊಂಡು ಇಂಧನ ದರಗಳನ್ನು ಹೆಚ್ಚಿಸಿತ್ತು. ಆದರೆ ಇಂದು ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆ ಗಣನೀಯವಾಗಿ ಇಳಿಕೆಯಾದರೂ ಅದರ ಲಾಭವನ್ನು ಜನರಿಗೆ ನೀಡುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
ಇದರ ಪರಿಣಾಮವಾಗಿ ಬಡವರು, ಮಧ್ಯಮ ವರ್ಗದ ಕುಟುಂಬಗಳು, ರೈತರು, ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಂಧನ ದರಗಳ ಏರಿಕೆಯಿಂದಾಗಿ ಸಾರಿಗೆ ವೆಚ್ಚ ಹೆಚ್ಚಾಗಿ, ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಆಹಾರ ಪದಾರ್ಥಗಳಿಂದ ಹಿಡಿದು ದಿನನಿತ್ಯ ಬಳಕೆಯ ವಸ್ತುಗಳವರೆಗೆ ಎಲ್ಲದರ ಮೇಲೂ ಹಣದುಬ್ಬರದ ಹೊರೆ ಹೆಚ್ಚಾಗಿದೆ. ಜನಸಾಮಾನ್ಯರ ಜೀವನ ದುಸ್ತರವಾಗಿದ್ದು, ಕುಟುಂಬಗಳ ಮಾಸಿಕ ಬಜೆಟ್ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಆದ್ದರಿಂದ ಕೇಂದ್ರ ಸರ್ಕಾರವು ಜನರ ಸಂಕಷ್ಟವನ್ನು ಅರ್ಥಮಾಡಿಕೊಂಡು ಕೂಡಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಗಣನೀಯವಾಗಿ ಕಡಿತಗೊಳಿಸಬೇಕು. ಕಚ್ಚಾ ತೈಲದ ಬೆಲೆ ಇಳಿಕೆಯ ಲಾಭವನ್ನು ನೇರವಾಗಿ ಜನರಿಗೆ ತಲುಪಿಸುವ ಮೂಲಕ ಹಣದುಬ್ಬರವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದಗದ್ದಾರೆ.
ಜನವಿರೋಧಿ ತೆರಿಗೆ ನೀತಿಗಳನ್ನು ಮುಂದುವರಿಸುವ ಬದಲು ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಬಂದಿದೆ. ದೇಶದ ಕೋಟ್ಯಂತರ ಬಡ ಹಾಗೂ ಮಧ್ಯಮ ವರ್ಗದ ಜನರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಕೂಡಲೇ ಇಂಧನ ದರಗಳನ್ನು ಇಳಿಸಿ ಜನರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬೇಕೆಂದು ಅಶೋಕ್ ಮೃತ್ಯುಂಜಯ ಒತ್ತಾಯಿಸಿದ್ದಾರೆ.
