ಕೊಳ್ಳೇಗಾಲ: ಪಟ್ಟಣದ ಜನತೆ ಹದಗೆಟ್ಟ ರಸ್ತೆ, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಅನೇಕ ಗಂಭೀರವಾದ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದು,ನಗರಸಭೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು 15 ದಿನದಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಕ ರ ವೇ (ಟಿ ಎ ನಾರಾಯಣ ಗೌಡರ ಬಣ) ತಾಲ್ಲೋಕು ಅಧ್ಯಕ್ಷ ಮೆಹಬೂಬ್ ಪಾಷಾ ಎಚ್ಚರಿಸಿದ್ದಾರೆ
ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಳ್ಳೇಗಾಲ ಪಟ್ಟಣದ ಸಾರ್ವಜನಿಕರು ಎದುರಿಸುತ್ತಿರುವ ಅತ್ಯಂತ ಗಂಭೀರವಾದ ಮೂಲಭೂತ ಸಮಸ್ಯೆಗಳನ್ನು ಸ್ಥಳೀಯ ಆಡಳಿತ ಮತ್ತು ಸರ್ಕಾರದ ಗಮನಕ್ಕೆ ತರಲು ನಾವು ಬಯಸುತ್ತೇವೆ. ನಮ್ಮ ನಗರವು ವೇಗವಾಗಿ ಬೆಳೆಯುತ್ತಿದ್ದರೂ, ನಾಗರಿಕರಿಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳು ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿ ಎಂದು ಹೇಳಿದರು.
ಹದಗೆಟ್ಟಿರುವ ರಸ್ತೆಗಳು ಮತ್ತು ಮಾರಣಾಂತಿಕ ಗುಂಡಿಗಳು:
ನಗರದ ಪ್ರಮುಖ ಎ ಪಿ ಎಂ ಸಿ ಮುಖ್ಯ ರಸ್ತೆ, ಪೀಸ್ ಪಾರ್ಕ್ ರಸ್ತೆ, ಲಿಂಗಣಾಪುರ ಮುಖ್ಯ ರಸ್ತೆ, ಎಸ್ ಡಿ ಎ ಶಾಲೆ ರಸ್ತೆ, ಸಾಮಂತಗಿರಿ ರಸ್ತೆ, ಸೇರಿದಂತೆ ಆಯಕಟ್ಟಿನ ವಾರ್ಡ್ಗಳ ಒಳರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿವೆ ಎಂದು ಕಿಡಿಕಾರಿದರು.
ಗುಂಡಿಬಿದ್ದ ರಸ್ತೆಗಳು:
ರಸ್ತೆ ತುಂಬಾ ಬಿದ್ದಿರುವ ಗುಂಡಿಗಳಿಂದಾಗಿ ವಾಹನ ಸವಾರರು, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ದಿನನಿತ್ಯ ಅಪಘಾತಕ್ಕೀಡಾಗುತ್ತಿದ್ದಾರೆ. ಶಾಲಾ ಮಕ್ಕಳು ಮತ್ತು ವೃದ್ಧರು ರಸ್ತೆ ದಾಟಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಮಳೆಗಾಲದಲ್ಲಂತೂ ಈ ಗುಂಡಿಗಳು ಕೆರೆಯಂತಾಗಿ ಸಾರ್ವಜನಿಕರ ಜೀವಕ್ಕೆ ಕಂಠಕವಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕತ್ತಲಲ್ಲಿ ಮುಳುಗಿದ ರಸ್ತೆಗಳು:
ನಗರದ ಹಲವಾರು ಬಡಾವಣೆಗಳಲ್ಲಿ ಮತ್ತು ಮುಖ್ಯವಾಗಿ ಸರ್ಕಾರಿ ಆಸ್ಪತ್ರೆ ವೃತ್ತ, ಡಾ. ಬಿ ಆರ್ ಅಂಬೇಡ್ಕರ್ ವೃತ್ತ, ಬೆಂಗಳೂರು ಮುಖ್ಯ ರಸ್ತೆ, ಮೈಸೂರು ಮುಖ್ಯ ರಸ್ತೆ ಹಾಗೂ ಆರ್ ಎಂ ಸಿ ವೃತ್ತದಲ್ಲಿ ಬೀದಿ ದೀಪಗಳಿಲ್ಲದೆ ರಸ್ತೆಗಳು ಕತ್ತಲಲ್ಲಿ ಮುಳುಗುತ್ತಿವೆ. ಇದರಿಂದಾಗಿ ಮಹಿಳೆಯರು ಮತ್ತು ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯುಂಟಾಗಿದೆ, ಕಳ್ಳತನ ಹಾಗೂ ದರೋಡೆಯಂತಹ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಲು ಇದು ಕಾರಣವಾಗಿದೆ ಎಂದು ಮೆಹಬೂಬ್ ಪಾಷಾ ತಿಳಿಸಿದರು.
ಕಸದ ರಾಶಿ:
ಸಮರ್ಪಕವಾಗಿ ನಗರದ ಹಲವು ಕಡೆಗಳಲ್ಲಿ ಕಸ ವಿಲೇವಾರಿ ನಡೆಯುತ್ತಿಲ್ಲ. ಖಾಲಿ ನಿವೇಶನಗಳು ಹಾಗೂ ರಸ್ತೆ ಬದಿಗಳಲ್ಲಿ ಕಸದ ರಾಶಿ ಬಿದ್ದಿದ್ದು, ರಸ್ತೆಗಳೇ ಡಂಪಿಂಗ್ ಯಾರ್ಡ್ ಗಳಾಗಿವೆ.
ನಗರದ ಬಸ್ ನಿಲ್ದಾಣದ ಮುಂಭಾಗ ಕಸ ತುಂಬಾ ಹೆಚ್ಚಾಗಿದೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೇಳತೀರದು. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ನಗರದ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯೂ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸ್ಥಳೀಯ ನಗರಸಭೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇನ್ನು 15 ದಿನದೊಳಗೆ ಗುಂಡಿ ಬಿದ್ದು ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು, ಕೆಟ್ಟು ನಿಂತಿರುವ ಬೀದಿ ದೀಪಗಳನ್ನು ಸರಿಪಡಿಸಬೇಕು ಮತ್ತು ನಗರದ ಸ್ವಚ್ಛತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾಗರಿಕರನ್ನು ಒಗ್ಗೂಡಿಸಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಯಳಂದೂರು ಅಧ್ಯಕ್ಷ ಮಹಾದೇವಸ್ವಾಮಿ ಮಾತನಾಡಿ, ಮಾನಸ ಶಿಕ್ಷಣ ಸಂಸ್ಥೆ, ವಿಸ್ಡಂ ಶಾಲೆ ಸೇರಿದಂತೆ ಇನ್ನಿತರ ಶಿಕ್ಷಣ ಸಂಸ್ಥೆಗಳಲ್ಲಿ ಶಾಲಾ ಶುಲ್ಕವನ್ನು ಒಮ್ಮೆಲೇ ಕಟ್ಟಬೇಕು ಎಂದು ಪೋಷಕರಿಗೆ ಒತ್ತಡ ಹೇರುತ್ತಿದ್ದಾರೆ. ಇದು ಖಂಡನಿಯ ಪೋಷಕರಿಗೆ ಎರಡು ಅಥವಾ ಮೂರು ಕಂತುಗಳಲ್ಲಿ ಶಾಲಾ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಿಕೊಡಬೇಕು ಈ ಬಗ್ಗೆ ಸಂಬಂಧಪಟ್ಟ ಶಿಕ್ಷಣ ಇಲಾಖೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಶಿವ ಟೆಕ್ಸ್ ಟೈಲ್ಸ್, ಗಣೇಶ ಸಿಲ್ಕ್ ಹಾಗೂ ಗೌರಿ ಸಿಲ್ಕ್ ಜವಳಿ ಅಂಗಡಿಗಳ ಮುಂಭಾಗ ಪಾರ್ಕಿಂಗ್ ವ್ಯವಸ್ಥೆಯ ಇಲ್ಲದೆ ದಿನನಿತ್ಯ ಟ್ರಾಫಿಕ್ ಸಮಸ್ಯೆಯಾಗಿ ಕಿರಿಕಿರಿ ಉಂಟಾಗುತ್ತಿದೆ, ಇತ್ತೀಚೆಗೆ ಶಿವ ಟೆಕ್ಸ್ಟ್ ಟೈಲ್ಸ್ ಬಳಿ ಟ್ರಾಫಿಕ್ ಸಮಸ್ಯೆಯಿಂದ ಅಪಘಾತ ಉಂಟಾಗಿತ್ತು, ಸಾರ್ವಜನಿಕರು ದಿನನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ ಈ ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಬರುವ ಗ್ರಹಕರಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಕೊಡಬೇಕು ಆ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕೆಂದು ಆಗ್ರಹಿಸಿದರು
ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಇರ್ಫಾನ್ ಆಲಿಖಾನ್, ಸಹ ಕಾರ್ಯದರ್ಶಿ ಮೊಹಮ್ಮದ್ ಜಾಬಿರ್, ತೌಶೀಫ್ ಬೇಗ್, ಜಾವೇದ್ ಪಾಷ ಮತ್ತಿತರರು ಹಾಜರಿದ್ದರು.
