ಬೆಂಗಳೂರು: ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ಬಿಡದಿ ಸಮಗ್ರ ಟೌನ್ಶಿಪ್-ಎ1 ಸಿಟಿ ಯೋಜನೆಗಾಗಿ ನಡೆಯುತ್ತಿರುವ ಬಲವಂತದ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಆ ಭಾಗದ ರೈತರು ಬೃಹತ್ ಪತ್ರ ಚಳವಳಿ ಆರಂಭಿಸಿದ್ದಾರೆ.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇತ್ತೀಚೆಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ಮಧ್ಯಪ್ರವೇಶಕ್ಕೆ ಕೋರಿದ್ದರು, ಜತೆಗೆ ರೈತರಿಗೂ ಇದೇ ಹಾದಿ ತುಳಿಯಲು ಕರೆ ನೀಡಿದ್ದರು.
ಇದಕ್ಕೆ ಸ್ಪಂದಿಸಿರುವ ಬಿಡದಿ ಭಾಗದ ನೂರಾರು ರೈತರು ಇಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಪತ್ರ ಬರೆದು, ಭೂಸ್ವಾಧೀನ ಪ್ರಕ್ರಿಯೆಗೆ ತಕ್ಷಣವೇ ಬ್ರೇಕ್ ಹಾಕುವಂತೆ ಒತ್ತಾಯಿಸಿದ್ದಾರೆ.
2013ರ ಭೂಸ್ವಾಧೀನ ಕಾಯ್ದೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ, ಯಾವುದೇ ಸಾರ್ವಜನಿಕ ಸಭೆ ನಡೆಸದೆ ಬಲವಂತವಾಗಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
ಇದರಿಂದ ಬಾಧಿತರಾಗುತ್ತಿರುವವರಲ್ಲಿ ಶೇ.82 ಕ್ಕೂ ಹೆಚ್ಚು ಮಂದಿ ಸಣ್ಣ ಹಿಡುವಳಿದಾರರು, ದಲಿತರು ಮತ್ತು ಹಿಂದುಳಿದ ವರ್ಗದವರಾಗಿದ್ದಾರೆ.
ಹಣಕಾಸು ಇಲಾಖೆಯ ತೀವ್ರ ವಿರೋಧದ ನಡುವೆಯೂ ಹುಡ್ಕೋ ಮೂಲಕ ಭಾರಿ ಸಾಲ ಪಡೆದು, ರೈತರ ಫಲವತ್ತಾದ ಭೂಮಿಯನ್ನು ರಿಯಲ್ ಎಸ್ಟೇಟ್ ಲಾಭಕ್ಕಾಗಿ ಕಬಳಿಸಲು ಸರ್ಕಾರ ಮುಂದಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ರೈತರ ಈ ಪತ್ರ ಚಳವಳಿಯ ಮೂಲಕ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ಸರ್ಕಾರ ಕೂಡಲೇ ಅಧಿಸೂಚನೆ ಹಿಂಪಡೆಯದಿದ್ದರೆ ಜೂನ್ 21 ರಂದು ಹಳ್ಳಿಗಳಲ್ಲಿ ಬೃಹತ್ ಪಾದಯಾತ್ರೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಜೆಡಿಎಸ್ ಮತ್ತು ರೈತ ಮುಖಂಡರು ಎಚ್ಚರಿಸಿದ್ದಾರೆ.
