ಮೈಸೂರು: ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗದಂತೆ ತಡೆಗಟ್ಟಲು ಅಗತ್ಯವಿರುವಷ್ಟು ಕಡೆಗಳಲ್ಲಿ ಟ್ಯಾಂಕರ್ ನೀರು ಪೂರೈಸಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹೆಚ್ಚುವರಿ ಟ್ಯಾಂಕರ್ ಬಳಕೆಗೆ ಟೆಂಡರ್ ಕರೆದು ಸಜ್ಜಾಗುವಂತೆ ಸೂಚಿಸಿದರು.
ನಗರಪಾಲಿಕೆ ವಲಯ ಮೂರರ ಕಚೇರಿ ಸಭಾಂಗಣದಲ್ಲಿ ಸೋಮವಾರ ನಗರಪಾಲಿಕೆ,ನಗರಸಭೆ,ಪಟ್ಟಣ ಪಂಚಾಯಿತಿ ಅಧಿಕಾರಿಗಳ ಸಭೆಯಲ್ಲಿ ಸದಾಸಕರು ಮಾತನಾಡಿದರು.
ಹೂಟಗಳ್ಳಿ,ಕೂರ್ಗಳ್ಳಿ,ಬೆಳವಾಡಿ ಭಾಗಗಳಲ್ಲಿ ಬೋರ್ವೆಲ್ ಸಂಪೂರ್ಣ ಬತ್ತಿ ಹೋಗಿದೆ. ಕೆಲವು ಕಡೆ ನೀರಿನ ಸಮಸ್ಯೆ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರು ಮನೆಗೆ ಬಂದು ದೂರು ನೀಡುತ್ತಿದ್ದಾರೆ. ಕಬಿನಿ,ಕೆಆರ್ಎಸ್ ಜಲಾಶಯದಿಂದ ಕೆಲವು ಪ್ರದೇಶಗಳಿಗೆ ನೀರು ಕೊಡುತ್ತಿದ್ದರೂ ಹಲವು ಪ್ರದೇಶಗಳಿಗೆ ಸಮಸ್ಯೆಯಾಗಿದೆ. ತಕ್ಷಣ ಅಗತ್ಯವಿರುವ ಕಡೆ ನೀರನ್ನು ಟ್ಯಾಂಕರ್ನಿಂದ ಕೊಡಬೇಕು ಎಂದು ಇ.ಟಿ.ದೇವೇಗೌಡ ಆದೇಶಿಸಿದರು.
ಹೂಟಗಳ್ಳಿನಗರಸಭೆ ಸಹಾಯಕ ಅಭಿಯಂತರ ದಿಲೀಪ್ ಮಾತನಾಡಿ,ಬೆಳವಾಡಿ,ಕೂರ್ಗಳ್ಳಿ ಭಾಗಗಳಲ್ಲಿ ಕೆಲವು ಕಡೆ ನೀರಿನ ಸಮಸ್ಯೆ ಇದೆ. ಅಮೃತೇಶ್ವರಿನಗರ, ಕಾಲೋನಿಗಳಿಗೆ ಹೆಚ್ಚು ಪೂರೈಸಲಾಗುತ್ತಿಲ್ಲ. ಕೆಆರ್ಎಸ್ ರಸ್ತೆಯಲ್ಲಿರುವ ಪಂಪ್ಹೌಸ್ನಲ್ಲಿ ಹೆಚ್ಚುವರಿಯಾಗಿ ಮೂರು ಮೋಟಾರ್ ಪಂಪ್ಗಳನ್ನು ಅಳವಡಿಸಿದರೆ ಸಮಸ್ಯೆ ಇತ್ಯರ್ಥವಾಗಲಿದೆ ಎಂದು ಹೇಳಿದರು
ವಿಜಯನಗರ ನಾಲ್ಕನೇ ಹಂತಕ್ಕೆ ಕೊಡುತ್ತಿರುವ ನೀರಿನಲ್ಲಿ ಈ ಭಾಗಕ್ಕೆ ಒಂದು ಎಂಎಲ್ಡಿ ಕೊಟ್ಟರೆ ಸರಿದೂಗಿಸಬಹುದು ಎಂದು ಶಾಸಕರ ಗಮನಕ್ಕೆ ತಂದರು.
ಕಡಕೊಳ ಪಪಂ ಮುಖ್ಯಾಧಿಕಾರಿ ಎಚ್.ಆರ್.ದೀಪಾ ಮಾತನಾಡಿ,ಶಾಂತವೇರಿ ಗೋಪಾಲಗೌಡ ನಗರ, ಕಡಕೊಳ, ಭಾಗಗಳಿಗೆ ಬೋರ್ವೆಲ್ ಕೊರೆಸಲಾಗಿದೆ.ಟ್ಯಾಂಕರ್ ನೀರು ಪೂರೈಕೆಗೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ಶ್ರೀರಾಂಪುರ ಪಪಂ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಮಾತನಾಡಿ, ಒಂದು ಪ್ರದೇಶ ಬಿಟ್ಟರೆ ಉಳಿದ ಕಡೆಗಳಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಮುಂಜಾಗ್ರತಾ ಕ್ರಮವಾಗಿ ಟ್ಯಾಂಕರ್ನಿಂದ ಕೊಡಲು ಟೆಂಡರ್ ಕರೆಯಲು ಅನುಮೋದನೆ ಪಡೆಯಲಾಗಿದೆ. ಬೋರ್ವೆಲ್ಗಳನ್ನು ರೀಡ್ರಿಲ್ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ನುಡಿದರು.
ಹೆಚ್ಚುವರಿ ೩ ಪಂಪ್: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಇಕ್ಬಾಲ್ ಆಸಿಫ್ ಮಾತನಾಡಿ,ಹಳೆಯ ಉಂಡುವಾಡಿ ಯೋಜನೆಗೆ ತೊಡಕಾಗಿದ್ದ ಚಿಕ್ಕನಹಳ್ಳಿ ಗ್ರಾಮದ ೧೪ ಎಕರೆ ಜಮೀನಿನಲ್ಲಿ ಏಳು ಎಕರೆ ಜಮೀನು ಇತ್ಯರ್ಥವಾಗಿದೆ. ಉಳಿದ ಏಳು ಎಕರೆ ಜಮೀನಿನ ಮಾಲೀಕರೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಹೆಚ್ಚಿನ ಪರಿಹಾರಕ್ಕೆ ಒಪ್ಪಿದ್ದಾರೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ನನ್ನನ್ನು ಕಾಯದೆ ಬೀದಿದೀಪಗಳನ್ನು ಅಳವಡಿಸಬೇಕು ಎಂದು ಹೂಟಗಳ್ಳಿ ನಗರಸಭೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಕೇಂದ್ರಸರ್ಕಾರ ನೀಡುವ ಅರ್ಬನ್ ಚಾಲೆಂಜ್ ಫಂಡ್(ಯುಸಿಎಫ್) ಯೋಜನೆಯಡಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಶಾಸಕ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ಹೇಳಿದರು.
ನಗರಪಾಲಿಕೆ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್,ವಲಯ ಮೂರರ ಆಯುಕ್ತ ಸಂದೀಪ್, ಹೂಟಗಳ್ಳಿ ನಗರಸಭೆ ಪೌರಾಯುಕ್ತ ಬಿ.ಎನ್.ಚಂದ್ರಶೇಖರ್, ಎಇಇ ಮಧು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಸುಜಯ್,ಎ.ಎಂ.ಶ್ರೀಧರ್, ಎಚ್.ಆರ್.ದೀಪಾ, ಮಹೇಶ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
