ಮೈಸೂರು: ಬಿಪಿಎಲ್ ಆದ್ರೂ ಇರ್ಲಿ, ಎಪಿಎಲ್ ಆದ್ರೂ ಇರ್ಲಿ, ನಿಮ್ಮ ಖಾತೆಗೆ ಟಕ್ ಟಕಾ ಟಕ್ ಹಣ ಹಾಕ್ತಿವಿ’ ಎಂದು ಚುನಾವಣೆ ಪೂರ್ವದಲ್ಲಿ ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದರು. ಆದರೆ ಈಗ ಗೃಹಲಕ್ಷ್ಮೀ ಯೋಜನೆಯನ್ನು ಬಿಪಿಎಲ್ ನೆಪವೊಡ್ಡಿ ಸ್ಥಗಿತಗೊಳಿಸಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಗೃಹ ಲಕ್ಷ್ಮಿಯರಿಗೆ ಕಾಂಗ್ರೆಸ್ ಸರ್ಕಾರ ದ್ರೋಹ ಮಾಡಿದೆ ಎಂದು ಬಿಜೆಪಿ ಮುಖಂಡರಾದ ಡಾ. ಹೇಮಾನಂದೀಶ್ ಕಿಡಿಕಾರಿದ್ದಾರೆ.
ಗೃಹಲಕ್ಷ್ಮೀ ಯೋಜನೆಯಡಿ 1.26 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ. ನೀಡುವ ಭರವಸೆ ನೀಡಿದ್ದ ಕಾಂಗ್ರೆಸ್, ಈಗ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣವನ್ನು ನೀಡದೆ ಲಕ್ಷಾಂತರ ಫಲಾನುಭವಿಗಳಿಗೆ ಅನ್ಯಾಯ ಮಾಡಿದೆ ಎಂದು ಅವರು
ಆರೋಪಿಸಿದ್ದಾರೆ.
ಸರ್ಕಾರ ಈಗ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನೆ, ತನಿಖೆ ನೆಪದಲ್ಲಿ ಯೋಜನೆಯನ್ನು ಕಡಿತಗೊಳಿಸಲು ಹೊರಟಿದೆ. 1.48 ಲಕ್ಷ ಮೃತ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ ಎಂಬ ಕಾರಣ ನೀಡಿ, ನೈಜ ಫಲಾನುಭವಿಗಳನ್ನೇ ಯೋಜನೆಯಿಂದ ಕೈಬಿಡುವ ಹುನ್ನಾರ ನಡೆದಿದೆ ಎಂದು ಡಾ ಹೇಮ ನಂದೀಶ್ ದೂರಿದ್ದಾರೆ.
ನಿಕಟಪೂರ್ವ ಸಚಿವೆ ಲಕ್ಷ್ಮಿ ಹೆಬ್ಬಾಳರ್ ಆರಂಭದಲ್ಲಿ ಆಗಸ್ಟ್ವರೆಗೆ ಎಲ್ಲಾ ಕಂತು ಪಾವತಿಯಾಗಿದೆ ಎಂದು ತಪ್ಪು ಮಾಹಿತಿ ನೀಡಿ, ನಂತರ ಎರಡು ಕಂತು ಬಾಕಿ ಇದೆ ಎಂದು ಒಪ್ಪಿಕೊಂಡಿದ್ದರು. 1.26 ಕೋಟಿ ಮಹಿಳೆಯರಿಗೆ ತಿಂಗಳಿಗೆ 2,000 ರೂ. ಅಂದರೆ ಎರಡು ತಿಂಗಳಿಗೆ 5,000 ಕೋಟಿ ರೂ.ಆಗುತ್ತದೆ. ಈ ಹಣ ಎಲ್ಲಿ ಹೋಯಿತು ಎಂಬ ಬಗ್ಗೆ ಸರ್ಕಾರ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
