ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದಲ್ಲಿ ರಾತ್ರಿ ದೊಡ್ಡ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪ ಜನನಿಬಿಡ ಪ್ರದೇಶದಲ್ಲೇ ಚಿರತೆ ಪ್ರತ್ಯಕ್ಷವಾಗಿದೆ. ರಾತ್ರಿ ಟಿ.ಕೆ. ಮನು, ಟಿ.ಎಸ್. ಅಭಿಷೇಕ್ ಗೌಡ ಎಂಬುವರು ಕಾರಿನಲ್ಲಿ ಹೋಗುತ್ತಿದ್ದಾಗ ಅಣ್ಣೇಸ್ವಾಮಿ ಅವರ ಮನೆಯ ಬಳಿ ಚಿರತೆ ರಸ್ತೆ ದಾಟುತ್ತಿದ್ದನ್ನು ಕಂಡು ತಕ್ಷಣ ಕಾರು ನಿಲ್ಲಿಸಿದ್ದಾರೆ.
ತಕ್ಷಣ ಚಾಲಕ ಟಿ.ಕೆ. ಮನು ತಮ್ಮ ಮೊಬೈಲ್ನಲ್ಲಿ ಚಿರತೆಯ ದೃಶ್ಯ ಸೆರೆ ಹಿಡಿದಿದ್ದಾರೆ.
ಇದೇ ರಸ್ತೆಯಲ್ಲಿ ಕಳೆದ ವಾರವೂ ಚಿರತೆ ಕಾಣಿಸಿಕೊಂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳೆದ ಹಲವು ತಿಂಗಳಿಂದ ಗ್ರಾಮದ ಸುತ್ತಮುತ್ತ 5-6 ಚಿರತೆಗಳು ಓಡಾಡುತ್ತಿದ್ದು, ಈಗಾಗಲೇ 10ಕ್ಕೂ ಹೆಚ್ಚು ಸಾಕು ಪ್ರಾಣಿಗಳನ್ನು ಬಲಿ ಪಡೆದಿವೆ.
ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆ ಸೆರೆ ಹಿಡಿಯಲು ಸೂಕ್ತ ಕ್ರಮ ವಹಿಸಬೇಕು ಎಂದು ಗ್ರಾಮದ ಹನುಮಂತು ಒತ್ತಾಯಿಸಿದ್ದಾರೆ.
ಕಾಲೇಜು ಸಮೀಪ ಚಿರತೆ ಕಾಣಿಸಿದ್ದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲೂ ಆತಂಕ ಶುರುವಾಗಿದೆ.
