ಮೈಸೂರು: ಸಿದ್ದಲಿಂಗಪುರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ, ಬೆಲವತ್ತ, ಹಳೇಕೆಸರೆ, ಕಾಮನಕೆರೆಹುಂಡಿ, ಲಕ್ಷ್ಮೀಪುರ, ಕಳಸ್ತವಾಡಿ ಗ್ರಾಮಗಳಿಗೆ 6 ತಿಂಗಳಲ್ಲಿ ಕಾವೇರಿ ಶಾಶ್ವತ ಕುಡಿಯುವ ನೀರು ಒದಗಿಸಲಾಗುವುದು ಎಂದು ಶಾಸಕ ಜಿ.ಟಿ. ದೇವೇಗೌಡ ಭರವಸೆ ನೀಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಏಕಲವ್ಯನಗರ, ನಾಗನಹಳ್ಳಿ, ಕಳಸ್ತವಾಡಿ, ಹಳೇಕೆಸರೆ, ಕಾಮನಕೆರೆಹುಂಡಿ ಗ್ರಾಮಗಳಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರದ ಸುತ್ತಮುತ್ತಲ ಬಡಾವಣೆಗಳು ಸೇರಿ ಹತ್ತಿರದ ಹಳ್ಳಿಗಳಿಗೂ 24×7 ಕುಡಿಯುವ ನೀರು ಒದಗಿಸಲು ಹಳೆಯ ಉಂಡುವಾಡಿ ಯೋಜನೆಯಡಿ ಕಾಮಗಾರಿ ಆರಂಭವಾಗಿದೆ. ಟ್ಯಾಂಕ್ಗಳ ನಿರ್ಮಾಣ ಮುಗಿದಿದ್ದು, ಪೈಪ್ಲೈನ್ ಅಳವಡಿಕೆ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದರು.
ಏಕಲವ್ಯನಗರದಲ್ಲಿ 45 ಲಕ್ಷ ರೂ. ವೆಚ್ಚದ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು, ಬಾಕಿ ಇರುವ 241 ಮನೆಗಳನ್ನು 1 ತಿಂಗಳಲ್ಲಿ ಹಂಚಿಕೆ ಮಾಡುವಂತೆ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ರಾಘವೇಂದ್ರ ಅವರಿಗೆ ದೂರವಾಣಿ ಮೂಲಕ ಸೂಚಿಸಿದರು.
ವಸತಿ ನಿಲಯ ಮತ್ತು ಸ್ಮಶಾನಕ್ಕೆ ಸ್ಥಳ ಮೀಸಲಿಡುವಂತೆ ರಾಜಸ್ವ ನಿರೀಕ್ಷಕ ಹೇಮಂತ್ ಅವರಿಗೆ ಆದೇಶಿಸಿ,ನಮ್ಮ ಕ್ಲಿನಿಕ್’ಗೆ ವೈದ್ಯರನ್ನು ನೇಮಿಸಲು ಡಿಎಚ್ಒಗೆ ಸೂಚನೆ ನೀಡಿದರು.
ಜಿ.ಪಂ. ಮಾಜಿ ಸದಸ್ಯ ನಾಗನಹಳ್ಳಿ ದಿನೇಶ್, ಸಿದ್ದಲಿಂಗಪುರ ಅರಕೇಶ್ವರ್, ರಾಮೇಗೌಡ್ರು, ವಿಜೇಂದ್ರಣ್ಣ, ಕೃಷ್ಣಪ್ಪ, ಮಾಜಿ ತಾ.ಪಂ. ಅಧ್ಯಕ್ಷ ಕುಮಾರ್, ರೇವಣ್ಣ, ನಾರಾಯಣಪ್ಪ, ಮರಿಸ್ವಾಮಿ, ಕೆ.ಜೆ. ಮಾದೇಶ್, ಪುರಂದರ, ಯಶ್ವಂತ್, ಭಾಸ್ಕರ್, ರಶ್ಮಿಮಂಜು, ಕುಮಾರ್ ಚೌಡಪ್ಪ, ರಮೇಶ್, ಶಿವಲಿಂಗು, ಪ್ರಕಾಶ್, ಚೆನ್ನಿಗರಾಯ, ಯೋಗೇಶ್, ಮಾದೇಶ, ಜ್ಯೋತಿ, ಬೆಲವತ್ತ ರಘು, ವಿಶ್ವನಾಥ, ಕಮಾಕ್ಷಿ, ವಿನೋದ್ನಾಯ್ಡು, ಮತ್ತಿತರರು ಉಪಸ್ಥಿತರಿದ್ದರು.
