ಮೈಸೂರು: ಮೈಸೂರಿನ ಚಿಕ್ಕಗಡಿಯಾರದ ಬಳಿ ಬೀದಿ ಬದಿ ವ್ಯಾಪಾರಿಗಳನ್ನು ಕರ್ನಾಟಕ ವಿಧಾನ ಮಂಡಲ ಅಧೀನ ಶಾಸನ ರಚನಾ ಸಮಿತಿ ಅಧ್ಯಕ್ಷರೂ ಶಾಸಕಾದ ಎಸ್.ಆರ್. ಶ್ರೀನಿವಾಸ್ ಖುದ್ದು ಭೇಟಿ ಮಾಡಿ ಕುಂದುಕೊರತೆಗಳನ್ನು ಆಲಿಸಿದರು.
ವ್ಯಾಪಾರಿಗಳ ಸಮಸ್ಯೆ ಕೇಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಬೀದಿ ಬದಿ ವ್ಯಾಪಾರಿಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ವ್ಯಾಪಾರಿಗಳ ಹಿತರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮೈಸೂರು ಮಹಾನಗರ ಪಾಲಿಕೆಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ಸರ್ವೇ ನಡೆಸಲು ಹೊಸದಾಗಿ ಟೆಂಡರ್ ಕರೆಯಲಾಗಿದೆ. ಈ ಹಿಂದೆ ಟೆಂಡರ್ ಪಡೆದ ಸಂಸ್ಥೆ ಸಮರ್ಪಕವಾಗಿ ಕೆಲಸ ನಿರ್ವಹಿಸದ ಕಾರಣ ವಿಳಂಬವಾಗಿತ್ತು. ಈ ಬಾರಿ ಪಾಲಿಕೆಯೇ ಸರ್ವೇ ನಡೆಸಿ,ಗುರುತಿನ ಚೀಟಿ ಸಿಗದವರಿಗೆ ತಪ್ಪದೇ ಕಾರ್ಡ್ ತಲುಪಿಸುವಂತೆ ಪಾಲಿಕೆ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸರ್ಕಾರ ನೀಡುವ ಆರ್ಥಿಕ ನೆರವು ಮತ್ತು ಸವಲತ್ತುಗಳನ್ನು ಬಳಸಿ ವ್ಯಾಪಾರ ವೃದ್ಧಿಸಿಕೊಳ್ಳುವುದು ವೈಯಕ್ತಿಕ ನಿರ್ಧಾರ. ಆದರೆ ಮೂಲಭೂತ ಸೌಲಭ್ಯಗಳು ಪ್ರತಿಯೊಬ್ಬರಿಗೂ ಸರಿಯಾಗಿ ತಲುಪುತ್ತಿವೆಯೇ ಎಂಬುದನ್ನು ಪರಿಶೀಲಿಸುವುದು ನಮ್ಮ ಕರ್ತವ್ಯ. ಸೌಲಭ್ಯ ತಲುಪದೇ ಇದ್ದರೆ, ಅದನ್ನು ಪ್ರತಿಯೊಬ್ಬರಿಗೂ ತಲುಪಿಸುವ ಪ್ರಾಮಾಣಿಕ ವ್ಯವಸ್ಥೆಯನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದು ಶ್ರೀನಿವಾಸ್ ಭರವಸೆ ನೀಡಿದರು.
ವ್ಯಾಪಾರಿಗಳ ಗುರುತಿಸುವಿಕೆ ಹಾಗೂ ಸರ್ಕಾರದ ಸೌಲಭ್ಯಗಳ ವಿತರಣಾ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲು ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಮತ್ತೊಂದು ಪ್ರಮುಖ ಸಭೆ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.
ಪರಿಶೀಲನೆ ವೇಳೆ ಸಮಿತಿ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶರವಣ್, ಕೆ. ಶಿವಕುಮಾರ್, ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ, ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್, ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
