(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಡಿ ಕೆ ಶಿವಕುಮಾರ್ ಅವರ ನೇತೃತ್ವದ ನೂತನ ಸರ್ಕಾರದಿಂದ ಡಾ. ಹೆಚ್ ಸಿ ಮಹದೇವಪ್ಪ ಅವರನ್ನು ಮಂತ್ರಿ ಸ್ಥಾನದಿಂದ ಕೈ ಬಿಟ್ಟಿರುವುದನ್ನು ಖಂಡಿಸಿ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿಗಳ ನೇತೃತ್ವದಲ್ಲಿ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಡಾ.ಹೆಚ್ ಸಿ ಮಹಾದೇವಪ್ಪ ಅಭಿಮಾನಿ ಬಳಗ ಕರೆದಿದ್ದ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಜಿ. ಪಂ ಮಾಜಿ ಸದಸ್ಯ ನಾಗರಾಜು (ಕಮಲ್),ಡಾ. ಹೆಚ್ ಸಿ ಮಹದೇವಪ್ಪ ಅವರು ರಾಜ್ಯ ಕಂಡ ಅಪ್ರತಿಮ ಬಲಗೈ ಸಮುದಾಯದ ನಾಯಕ, ಅಪ್ಪಟ ಅಂಬೇಡ್ಕರ್ ವಾದಿಗಳು. ತಮ್ಮ ಅಧಿಕಾರಾವಧಿಯಲ್ಲಿ ಮೈಸೂರು ಭಾಗದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಿದ್ದಾರೆ, ಸಮಾಜ ಕಲ್ಯಾಣ ಸಚಿವರಾಗಿ ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಬಲಗೈ ಸಮುದಾಯಕ್ಕೆ ಧ್ವನಿಯಾಗಿರುವ ಮಹದೇವಪ್ಪರವರು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಸಂವಿಧಾನ ಪೀಠಿಕೆ ಸ್ಥಬ್ದ ಚಿತ್ರ ಮೆರವಣಿಗೆ ಮಾಡಿಸಿ ರಾಜ್ಯದ ಜನತೆಗೆ ಸಂವಿಧಾನ ಹಾಗೂ ಅಂಬೇಡ್ಕರ್ ಅವರ ಬಗ್ಗೆ ಜಾಗೃತಿ ಮೂಡಿಸಿದ್ದರು. ಹಾಗೂ ಸಂವಿಧಾನದ ಹಕ್ಕು ಭಾದ್ಯತೆಗಳನ್ನು ಜನತೆಗೆ ತಿಳಿಸಿ ಕೊಡುವ ಕೆಲಸ ಮಾಡಿದ್ದಾರೆ ಎಂದು ತಳಿಸಿದರು
ಅಂತಹ ಮಹದೇವಪ್ಪನವರಿಗೆ ಡಿ. ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಮಂತ್ರಿ ಮಂಡಲದಲ್ಲಿ ಅವಕಾಶ ಕೊಡದೆ ಇರುವುದು ಖಂಡನೀಯ, ಸರ್ಕಾರದ ಬಲಗೈ ವಿರೋಧಿ ನೀತಿಯನ್ನು ಖಂಡಿಸಿ ಗುರುವಾರ ನಮ್ಮ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿಗಳ ನೇತೃತ್ವದಲ್ಲಿ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಡಗೆರೆ ಮಹಾದೇವರವರು ಮಾತನಾಡಿ ನಮ್ಮ ಮೈಸೂರು ಚಾಮರಾಜನಗರ ಭಾಗದಲ್ಲಿ ಸಮುದಾಯಕ್ಕೆ ಧ್ವನಿಯಾಗಿದ್ದವರು ನಮ್ಮ ನಾಯಕರಾದ ಡಾ. ಎಚ್ ಸಿ. ಮಹದೇವಪ್ಪರವರು. ಅವರನ್ನು ನೂತನ ಸರ್ಕಾರದ ಸಚಿವ ಸಂಪುಟದಿಂದ ಕೈ ಬಿಡಲಾಗಿದೆ. ಕಳೆದ ಅವಧಿಯ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಮಹದೇವಪ್ಪರವರಿಗೆ ಮಂತ್ರಿ ಸ್ಥಾನ ಕೊಡಲಾಗಿತ್ತು, ಆದರೆ ಈಗ ಅವರಿಗೆ ಮಂತ್ರಿ ಸ್ಥಾನ ಕೊಡದೆ ಇರುವುದು ನಮ್ಮ ಸಮುದಾಯಕ್ಕೆ ಆಘಾತವನ್ನುಂಟು ಮಾಡಿದೆ. ನಮ್ಮ ಸಮುದಾಯಕ್ಕೆ ಧ್ವನಿಯಾಗಿರುವ ಮಹಾದೇವಪ್ಪರವರ ಕೈ ಬಲ ಪಡಿಸಬೇಕು ಆದ್ದರಿಂದ ನಮ್ಮ ಸಮುದಾಯದ ಎಲ್ಲರು ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದರು.
ನಮ್ಮ ಸಮುದಾಯದ ಐದು ನಾಯಕರಿಗೂ ಕೂಡ ಮಂತ್ರಿ ಸ್ಥಾನ ಕೊಡಬೇಕು ಇಲ್ಲದಿದ್ದರೆ 2028 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.
ಗುರುವಾರ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ಬಲಗೈ ಸಮುದಾಯದ ಎಲ್ಲಾ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಘೋಷ್ಠಿಯಲ್ಲಿ ನಗರಸಭಾ ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು, ಡಾ.ಗುರುಮೂರ್ತಿ, ಅಹಿಂದ ಘಟಕದ ಶಂಭುಲಿಂಗಸ್ವಾಮಿ, ಚಾ.ನಗರ ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷ ಸಂಘಸೇನಾ, ಮಹಮ್ಮದ್ ಮತೀನ್, ರಾಜೇಶ್, ಖಿಜರ್ ಮತ್ತಿತರರು ಉಪಸ್ಥಿತರಿದ್ದರು.
