ಮಂಡ್ಯ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಮೇಲೆ ಕಾಂಗ್ರೆಸ್ ನಾಯಕರಿಗೆ ಅತಿಯಾದ ಅನುಕಂಪ ಬಂದಿದೆ. ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಆ ಪಕ್ಷ ಅನುಕಂಪದ ಅಸ್ತ್ರ ಪ್ರಯೋಗಿಸುತ್ತಿದೆ ಎಂದು ಕೇಂದ್ರ ಸಚಿವರು ಹಾಗೂ ಜೆಡಿಎಸ್ ರಾಜ್ಯ ಅಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದ ತಗ್ಗಹಳ್ಳಿ ಗ್ರಾಮದಲ್ಲಿ ಸಿಎಸ್ಆರ್ ನಿಧಿ ಅನುದಾನದಿಂದ ನೂತನವಾಗಿ ನಿರ್ಮಾಣಗೊಂಡಿರುವ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ನಂತರ ಕುಮಾರಸ್ವಾಮಿ ಮಾಧ್ಯಮಗಳ ಜೊತೆ ಮಾತನಾಡಿದರು.
ರಾಜ್ಯಸಭೆ ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಅನಗತ್ಯವಾಗಿ ಮಾತನಾಡುತ್ತಿದ್ದಾರೆ. ದೇವೇಗೌಡರ ಬಗ್ಗೆ ಎಲ್ಲಿಲ್ಲದ ಅನುಕಂಪ ಬಂದಿದೆ. ಬಿಜೆಪಿ, ಜೆಡಿಎಸ್ ಮೈತ್ರಿಯಲ್ಲಿ ಬಿರುಕು ತರಲು ಕಾಂಗ್ರೆಸ್ ವಿಫಲ ಪ್ರಯತ್ನ ನಡೆಸುತ್ತಿದೆ. ರಾಜ್ಯಸಭೆ ಟಿಕೆಟ್ಗೆ ದೇವೇಗೌಡರು ಅರ್ಜಿಯೇ ಹಾಕಿಲ್ಲ ಎಂದು ಹೆಚ್ ಡಿ ಕೆ ಸ್ಪಷ್ಟಪಡಿಸಿದರು.
ತನ್ನಲ್ಲಿ ಆಗುತ್ತಿರುವ ಬೆಳವಣಿಗೆಗಳು ಮತ್ತು ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಕಾಂಗ್ರೆಸ್ ಪಕ್ಷವು ದೇವೇಗೌಡರನ್ನು ನೆಪ ಮಾಡಿಕೊಂಡು ರಾಜಕೀಯ ಮಾಡುತ್ತಿದೆ, ದೇವೇಗೌಡರದು ಹೋರಾಟದ ಬುದಕು. ಅವರು ಅಧಿಕಾರಕ್ಕಾಗಿ ಹಪಹಪಿಸಲಿಲ್ಲ
ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪ್ರಧಾನಿ ಸ್ಥಾನವನ್ನೇ ಬಿಟ್ಟು ಬಂದವರು, ಅದೆಲ್ಲವೂ ಕಾಂಗ್ರೆಸ್ ಪಕ್ಷಕ್ಕೆ ಗೊತ್ತಿಲ್ಲವೇ ಎಂದು ಕಟುವಾಗಿ ಪ್ರಶ್ನಿಸಿದರು.
ಕಳೆದ ಬಾರಿ ದೇವೇಗೌಡರ ಅವಿರೋಧ ಆಯ್ಕೆಗೆ ಕಾಂಗ್ರೆಸ್ ಬೆಂಬಲದ ಬಗ್ಗೆಯೂ ಮಾತನಾಡಿದ ಕುಮಾರಸ್ವಾಮಿ ಅವರು; ಆಗ ದೇವೇಗೌಡರ ವಿರುದ್ಧ ಇನ್ನೊಬ್ಬ ಅಭ್ಯರ್ಥಿ ನಿಲ್ಲುವ ಅವಕಾಶ ಇರಲಿಲ್ಲ. ಆ ಸಂದರ್ಭದಲ್ಲಿ ಯಾವುದೇ ಪಕ್ಷಕ್ಕೆ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುವಷ್ಟು ಸಂಖ್ಯಾಬಲ ಇರಲಿಲ್ಲ. ನಮ್ಮ ಪಕ್ಷಕ್ಕೆ ಸಂಖ್ಯಾಬಲ ಇತ್ತು, ಹೀಗಾಗಿ ರಾಜ್ಯಸಭೆಗೆ ದೇವೇಗೌಡರು ಆಯ್ಕೆಯಾದರು. ಅವರು ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆಗೆ ಹೋಗಲಿಲ್ಲ ಎಂದು ಅವರು ಹೆಚ್ ಡಿ ಕೆ ಹೇಳಿದರು.
ರಾಜ್ಯದಲ್ಲಿ ಒಕ್ಕಲಿಗ ಮುಖ್ಯಮಂತ್ರಿ ಇರಬೇಕಾದರೆ ರಾಜ್ಯಸಭೆ ತಗೊಂಡು ಏನ್ಮಾಡ್ತೀರಾ,ಎರಡು ತಿಂಗಳು ಕಾದು ನೋಡೋಣ, ಅವರೇನು ಮಾಡುತ್ತಾರೆ ಎಂಬುದನ್ನ ನೋಡೋಣ ಎಂದು ಹೇಳಿದರು.
ಮಾಜಿ ಸಚಿವ ಜಮೀರ್ ಅಹಮದ್ ಅವರು ತಮ್ಮ ಜತೆ ಸಂಪರ್ಕ ಹೊಂದಿದ್ದಾರೆ ಎಂಬ ವದಂತಿಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ನ ಯಾವ ನಾಯಕರನ್ನು ನಾನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ನಿಮ್ಮ ನಿವಾಸಕ್ಕೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ ನೀಡುತ್ತಾರಂತೆ,ತಮ್ಮಿಂದ ಸಲಹೆ ಕೇಳುವುದಾಗಿ ಹೇಳಿದ್ದಾರಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ, ನಾನೇನು ಸಲಹೆ ನೀಡಲಿ, ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿ ಏನು ಹರಿದಿದ್ದಾರೆ ಎಂದು ಹೇಳಿದ್ದಾರೆ. ಎಲ್ಲದಕ್ಕೂ ಸಾಕ್ಷಿ ಗುಡ್ಡೇ ಕೇಳುತ್ತಾರೆ. ನಾನೇನು ಹರಿದಿಲ್ಲ, ನನ್ನ ಬಳಿ ಬಂದು ಏನು ಸಲಹೆ ಕೇಳುತ್ತಾರೆ ಎಂದು ಮರು ಪ್ರಶ್ನಿಸಿದರು.
ಇಲ್ಲಿಗೆ ಬಂದು ಒಂದು ಫೋಟೊ ತಗೊಂಡು ಪತ್ರಿಕೇಲಿ ಹಾಕಿಸೋದು ಅಷ್ಟೇ. ಎಲ್ಲವನ್ನು ನಾನು ಬಲ್ಲೆ, ಹಿರಿಯರು ಒಂದು ಮಾತು ಹೇಳಿದ್ದಾರೆ, ಅತಿ ವಿನಯಂ ದೂರ್ತ ಲಕ್ಷಣಂ ಅಂತ ಆ ಮಾತು ನನಗೆ ಪದೇಪದೇ ನೆನಪಿಗೆ ಬರುತ್ತಿದೆ ಎಂದು ಕಟುವಾಗಿ ಟೀಕಿಸಿದರು.
ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಪಕ್ಷ ಅಭ್ಯರ್ಥಿ ಹಾಕಿರುವ ವಿಚಾರದ ಕೇಳಿದ ಪ್ರಶ್ನೆಗೆ, ನಮಗೂ ಎರಡು ಮತ ಬೇಕು, ಕಾಂಗ್ರೆಸ್ ಪಕ್ಷಕ್ಕೂ ಎರಡು ಮತ ಬೇಕು. ಇದರಲ್ಲಿ ಯಾವುದೇ ಗೇಮ್ ಪ್ಲಾನ್ ಇಲ್ಲ. ನಾವು ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಮತ ಹಾಕುವಂತೆ ಕೇಳುತ್ತೇವೆ. ನಮ್ಮ ಪ್ರಯತ್ನ ನಾವು ಮಾಡುತ್ತೇವೆ. ಕಾಂಗ್ರೆಸ್ ನವರಿಗೆ ಹಣ ಬಲ, ಅಧಿಕಾರ ಬಲ ಇದೆ, ನೋಡೋಣ ಏನಾಗುತ್ತದೆ ಎಂದು ಹೆಚ್ ಡಿ.ಕುಮಾರಸ್ವಾಮಿ ತಿಳಿಸಿದರು.
ಗ್ಯಾಸ್ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ, ಯುದ್ದದ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿದೆ. ಇದು ಭಾರತದಲ್ಲಿ ಮಾತ್ರ ಅಲ್ಲ. ಜಗತ್ತಿನ ಎಲ್ಲಾ ದೇಶಗಳಿಗೂ ಈ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.
