ಕುಶಾಲನಗರ: ಕುಶಾಲನಗರದ ಮೈಸೂರು-ಹುಣಸೂರು ಬೈಪಾಸ್ ರಸ್ತೆ,ಗಣಪತಿ ದೇವಸ್ಥಾನದ ಮುಂಭಾಗ ಯುಜಿಡಿ ಪೈಪ್ ಆಳವಡಿಸಲೆಂದು ಆಳುದ್ದದ ಗುಂಡಿ ತೋಡಿ ಹಾಗೆಯೇ ಬಿಡಲಾಗಿದ್ದು,ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.
ಈ ಮೊದಲೇ ಇಲ್ಲಿ ಪೈಪ್ ಇದ್ದು,ಅದು ಚೆನ್ನಾಗಿದ್ದರೂ ಮತ್ತೆ ಬೇರೆ ಪೈಪ್ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ.ಹೀಗೆ ಸರ್ಕಾರದ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.
ಬಸ್ ನಿಲ್ದಾಣ ಮುಂಭಾಗದಿಂದ ಹೀಗೆ ಗುಂಡಿ ತೆಗೆದು ಬಿಡಲಾಗಿದೆ. ಇಲ್ಲಿ ಬಹಳಷ್ಟು ಅಂಗಡಿ ಮಳಿಗೆಗಳು ಇವೆ, ಸಾರ್ವಜನಿಕರು ಸದಾ ಸಂಚರಿಸುತ್ತಾರೆ. ದೇವಾಲಯಕ್ಕೂ ಭಕ್ತಾದಿಗಳು ಬರುತ್ತಿರುತ್ತಾರೆ. ಇಂತಹ ಪ್ರಮುಖ ಜಾಗದಲ್ಲಿ ಹೀಗೆ ಗುಂಡಿಯನ್ನು ತೆಗೆದು ಹಾಗೆ ಬಿಡುವುದು ತಪ್ಪಲ್ಲವೇ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಈಗಾಗಲೇ ಮಳೆ ಪ್ರಾರಂಭವಾಗಿದೆ, ಹೀಗೆ ಗುಂಡಿ ತೆಗೆದು ಹಾಗೆಯೇ ಬಿಟ್ಟರೆ ಅದರಲ್ಲಿ ನೀರು ತುಂಬಿ ಅನಾಹುತ ಆಗುವುದಂತೂ ಕಟ್ಟಿಟ್ಟ ಬುತ್ತಿ.ಯಾವುದೇ ಪ್ರಾಣಿಗಳು ಗುಂಡಿಯಲ್ಲಿ ಬಿದ್ದರೂ ಅವಘಡ ತಪ್ಪಿದ್ದಲ್ಲ ಎಂದು ಚೆಲುವರಾಜು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.
ಕೂಡಲೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಮತ್ತು ಹೀಗೆ ಸಮ್ಮಸಮ್ಮನೆ ತಮಗೆ ಇಷ್ಟ ಬಂದಂತೆ ಗುಂಡಿ ತೆಗೆಯುವುದು,ಯುಜಿಡಿ ಪೈಪ್ ಅಳವಡಿಸುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಪರವಾಗಿ ಚೆಲುವರಾಜು ಆಗ್ರಹಿಸಿದ್ದಾರೆ.
ಇದು ಅತ್ಯಂತ ಪ್ರಮುಖ ರಸ್ತೆಯಾಗಿದ್ದು ರಸ್ತೆ ಮಧ್ಯೆ ಗುಂಡಿ ತೆಗೆದು ರಾಡಿ ಮಾಡಲಾಗಿದೆ. ಮತ್ತೆ ಇದನ್ನು ಮುಚ್ಚುವುದು ಯಾವಾಗ ಡಾಂಬರೀಕರಣ ಮಾಡುವುದು ಯಾವಾಗ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

