
ಮೈಸೂರು: 2025-26ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಆರ್. ಕೃಷ್ಣಕುಮಾರ್ (ದಿ ಹಿಂದೂ), ಕೆ. ನರಸಿಂಹಮೂರ್ತಿ (ಪ್ರಜಾವಾಣಿ), ಬಾಲಕೃಷ್ಣ ಮದ್ದೂರು (ಸಂಯುಕ್ತ ಕರ್ನಾಟಕ), ಕುಂದೂರು ಉಮೇಶ್ ಭಟ್ (ಪ್ರಜಾವಾಣಿ), ಶಿವಕುಮಾರ್ ವಿ. ರಾವ್, ಎ.ಸಿ.ಪ್ರಭಾಕರ್ (ಮೈಸೂರು ಮಿತ್ರ), ಹೆಚ್.ಕೆ. ನಾಗೇಶ್ (ವಿಜಯ ಕರ್ನಾಟಕ), ಕೆ.ಟಿ.ಮಂಜುನಾಥ್ (ನಗರದೂತ), ಮೋಹನ್ ಕುಮಾರ್ ಸಿ. (ಪ್ರಜಾವಾಣಿ) ಅವರುಗಳನ್ನು ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸೋಮಶೇಖರ್ ಕೆರೆಗೋಡು, ಪತ್ರಕರ್ತರು ಸಮಾಜಕ್ಕಾಗಿ ಹಗಲು-ರಾತ್ರಿ ದುಡಿಯುತ್ತಾರೆ. ಅವರ ಮಕ್ಕಳ ಈ ಸಾಧನೆಗೆ ತಂದೆ-ತಾಯಿಯ ತ್ಯಾಗವೇ ಕಾರಣ. ಇಂತಹ ಪ್ರತಿಭೆಗಳನ್ನು ಗುರುತಿಸುವುದು ಸಂಘದ ಜವಾಬ್ದಾರಿ ಎಂದು ಹೇಳಿದರು.
ಜಿ.ಎಸ್.ಎಸ್. ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀಹರಿ ದ್ವಾರಕನಾಥ್ ಅವರು ಮಾತನಾಡಿ, “ಅಕ್ಷರಕ್ಕೆ ಶಕ್ತಿ ತುಂಬುವ ಪತ್ರಕರ್ತರ ಕುಟುಂಬದಿಂದ ಶಿಕ್ಷಣ ಕ್ಷೇತ್ರದಲ್ಲೂ ಸಾಧಕರು ಹೊರಬರುತ್ತಿರುವುದು ಹೆಮ್ಮೆಯ ವಿಷಯ. ಈ ಮಕ್ಕಳು ಮುಂದೆ ದೇಶಕ್ಕೆ ಆಸ್ತಿಯಾಗಲಿ ಎಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಪೀಠಾಧಿಪತಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶಾಸಕ ಜಿ. ಡಿ.ಹರೀಶ್ ಗೌಡ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.
