ಮೈಸೂರು: ಈ ಬಾರಿ ವಿಶ್ವ ಯೋಗ ದಿನದಂದು 1.20 ಲಕ್ಷ ಜನರನ್ನು ಸೇರಿಸಿ ಸಾಮೂಹಿಕ ಯೋಗಾಭ್ಯಾಸ ಮಾಡುವ ಸಂಕಲ್ಪ ಮಾಡಲಾಯಿತು.
ಯೋಗ ಫೆಡರೇಷನ್ ಆಫ್ ಮೈಸೂರು ವತಿಯಿಂದ ನಗರದ ಸರಸ್ವತಿಪುರಂನಲ್ಲಿರುವ ವಿಜಯ ವಿಠಲ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಸಂಕಲ್ಪ ದಿನ-2026 ಕಾರ್ಯಕ್ರಮದಲ್ಲಿ ನೂರಾರು ಯೋಗಪಟುಗಳು ಹಾಗೂ ಯೋಗ ಶಿಕ್ಷಕರು ಈ ಸಂಕಲ್ಪ ಮಾಡಿ ಪ್ರಮಾಣ ವಚನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತ ಸಿ.ಕೆ.ಮಹೇಂದ್ರ, ಮೈಸೂರು ಜಾಗತಿಕ ಮಟ್ಟದಲ್ಲಿ ಯೋಗ ನಗರವಾಗಿ ಪ್ರಸಿದ್ಧಿ ಗಳಿಸಿದೆ. ವಿಶ್ವ ಯೋಗ ದಿನ ಪರಿಕಲ್ಪನೆ ಘೋಷಣೆಯಾದ ವರ್ಷದಿಂದಲೂ ದೊಡ್ಡ ಮಟ್ಟದಲ್ಲಿ ಯೋಗ ಕಾರ್ಯಕ್ರಮಗಳನ್ನು ಸಂಘಟಿಸಿ ದಾಖಲೆ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಈಗ ಬೆಳಗಿನ ಜಾವದಲ್ಲಿ ಯೋಗಪಟುಗಳು ಕಾಣಸಿಗುತ್ತಾರೆ. ಮನೆ, ಉದ್ಯಾನ, ಸಂಘ-ಸಂಸ್ಥೆಗಳಲ್ಲಿ ಯೋಗಾಭ್ಯಾಸಕ್ಕೆ ಬರುವ ಅಥವಾ ಹೋಗುವ ಜನ ರಸ್ತೆಗಳಲ್ಲಿ ಕಾಣಿಸುತ್ತಾರೆ. ಅಂದರೆ, ಜನರಿಗೆ ಆರೋಗ್ಯ ಮತ್ತು ಯೋಗದ ಮಹತ್ವ ಅರಿವಾಗಿದೆ. ಇದನ್ನು ನಾವು ಇನ್ನಷ್ಟು ವಿಸ್ತರಿಸೋಣ. ಮುಂಬರುವ ಯೋಗ ದಿನವನ್ನು ಯಶಸ್ವಿಗೊಳಿಸೋಣ ಎಂದು ಮನವಿ ಮಾಡಿದರು.
ಮೈಸೂರು ಯೋಗ ಒಕ್ಕೂಟ, ಜಿಎಸ್ಎಸ್ ಯೋಗ, ಭಾರತ್ ಸ್ವಾಭಿಮಾನ್ ಟ್ರಸ್ಟ್, ಮೈಸೂರು ಯೋಗ ಅಸೋಸಿಯೇಷನ್, ಯೋಗ ಸ್ಪೋರ್ಟ್ಸ್ ಫೌಂಡೇಶನ್, ಎಸ್ಪಿವೈಎಸ್ಎಸ್ ಮುಂತಾದ ಸಂಘಟನೆಗಳ ಸದಸ್ಯರು ಯೋಗ ಶಿಷ್ಟಾಚಾರದ ಅನ್ವಯ ಯೋಗಾಭ್ಯಾಸ ಮಾಡಿದರು.
ಜಿಎಸ್ಎಸ್ ಯೋಗ ಸಂಸ್ಥೆಯ ಸಂಸ್ಥಾಪಕ ಶ್ರೀಹರಿ ದ್ವಾರಕನಾಥ್, ರಂಗನಾಥ್, ಸರಳ ಹಾಗೂ ವಿವಿಧ ಸಂಘಟನೆಗಳ ಶಶಿಕುಮಾರ್, ದೇವರಾಜು, ಜಲೇಂದ್ರ, ಬಿ.ಪಿ.ಮೂರ್ತಿ, ಶ್ರೀನಿವಾಸ ನಾಯ್ಡು, ಕಿರಣ್ ಮತ್ತಿತರರು ಹಾಜರಿದ್ದರು.
