ಯಳಂದೂರು: ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಇಂದು ಹಬ್ಬದ ವಾತಾವರಣ ಮನೆ ಮಾಡಿತ್ತು.
ಶನಿವಾರ ಬೆಳಿಗ್ಗೆ ಗ್ರಾಮದ
ಬುದ್ಧ,ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಹೊನ್ನೂರು ಗ್ರಾಮದ ಮಹಾವನ ಬುದ್ಧ ವಿಹಾರದ ಬಿಕ್ಕು ಬೋದಿರತ್ನ ಬಂತೇಜಿ ಅವರ ದಿವ್ಯ ಸಾನಿದ್ಯದಲ್ಲಿ, ಅಂಬೇಡ್ಕರ್ ಸಂಘ ಹಾಗೂ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬುದ್ಧ ಹಾಗೂ ಅಂಬೇಡ್ಕರ್ ಪ್ರತಿಮೆಗೆ ಪ್ರಾರ್ಥನೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿ ನಂತರ ಬೆಳ್ಳಿ ರಥದಲ್ಲಿ ಅಂಬೇಡ್ಕರ್ ಭಾವಚಿತ್ರ ಇಟ್ಟು ವಿವಿಧ ಪುಷ್ಪಾಲಂಕಾರಿಗಳಿಂದ ಸಿಂಗರಿಸಲಾಯಿತು. ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ನಂತರ ವಾದ್ಯಕಲಾ ತಂಡದೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ವೇಳೆ ಯುವಕರು ಯುವತಿಯರು ಮಹಿಳೆಯರು, ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಹೊನ್ನೂರು ಗ್ರಾಮದ ಮಹಾವನ ಬುದ್ಧ ವಿಹಾರದ ಬಿಕ್ಕು ಬೋದಿರತ್ನ ಬಂತೇಜಿ ಅವರು ಮಾತನಾಡಿ ಬೌದ್ಧ ಧರ್ಮ ವ್ಯಕ್ತಿ ಪೂಜೆ, ವಿಗ್ರಹಾರಾಧನೆ, ಮೂಢನಂಬಿಕೆಯನ್ನು ವಿರೋಧಿಯಾಗಿದ್ದು, ಮಿತ ಜೀವನ ಮತ್ತು ಸಾತ್ವಿಕತೆಯನ್ನು ಬೋಧಿಸುತ್ತದೆ ಎಂದು ತಿಳಿಸಿದರು.
ಜಗತ್ತಿಗೆ ಶಾಂತಿ ಸಂದೇಶವನ್ನು ಬೋಧಿಸುವ ಬುದ್ಧ ಧರ್ಮದ ಮೂಲಸ್ಥಾನವಾದ ಭಾರತದಲ್ಲೇ ಬೌದ್ಧ ಧರ್ಮದ ಉಳಿವಿಗೆ ಹೋರಾಟ ನಡೆಸಬೇಕಾದುದು ನಮ್ಮೆಲ್ಲರ ದುರ್ದೈವ ಎಂದು ವಿಷಾದಿಸಿದರು.
ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕಸಿದ ನಂತರ ಸಂಚರಿಸಿದ ಸ್ಥಳಗಳು ಪವಿತ್ರ ಸ್ಥಳಗಳಾಗಿವೆ. ಹಾಗಾಗಿ ಅಂಬೇಡ್ಕರ್ ಅನುಯಾಯಿಗಳು ಈ ಸ್ಥಳಗಳಿಗೆ ಬೇಟಿ ನೀಡಬೇಕು.ಬಾಬಾ ಸಾಹೇಬರ ಆದರ್ಶಗಳನ್ನು ಅನುಸರಿಸಬೇಕು ಎಂದು ಬೋದಿರತ್ನ ಬಂತೇಜಿ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸಂಘದ ಪದಾಧಿಕಾರಿಗಳು, ಅಂಬೇಡ್ಕರ್ ಆಚರಣ ಸಮಿತಿ ಸದಸ್ಯರು, ಗ್ರಾಮದ ಎಲ್ಲಾ ವರ್ಗದ ಮುಖಂಡರು, ಯಜಮಾನರು, ಗೌಡರು, ಸರ್ಕಾರಿ ನೌಕರರು, ನಿವೃತ್ತ ನೌಕರರು, ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಸಿಲ್ಕ್ ಡೀಲರ್ಸ್ ಗಳು, ಲಿಫ್ಟ್ ಕೂಲಿ ಕಾರ್ಮಿಕರು,ಗ್ರಾಮ ಪಂಚಾಯತಿಯ ಸದಸ್ಯರು, ಅಧ್ಯಕ್ಷರು, ಜನಪ್ರತಿನಿಧಿಗಳು, ಮುಖಂಡರು ಮಹಿಳೆಯರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
