ನವದೆಹಲಿ: ಪಾಕ್ ನಲ್ಲಿ 2019ರ ಪುಲ್ವಾಮಾ ದಾಳಿಯ ಪ್ರಮುಖ ಸಂಚುಕೋರ ಹಾಗೂ ಅಲ್-ಬದ್ರ್ ಉಗ್ರಗಾಮಿ ಸಂಘಟನೆಯ ಕಮಾಂಡರ್ ಹಮ್ಜಾ ಬುರ್ಹಾನ್ ನನ್ನು ಹತ್ಯೆ ಮಾಡಲಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಮುಜಫರಾಬಾದ್ ಬಳಿ ದುಷ್ಕರ್ಮಿಗಳು ಹಮ್ಜಾ ಬುರ್ಹಾನ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ಮುಜಫರಾಬಾದ್ನಲ್ಲಿ ಹಮ್ಜಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪರಿಚಿತ ಬಂದೂಕುಧಾರಿಗಳು ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಈತ ಭಾರತದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮೂಲದವನಾಗಿದ್ದು, ಭಾರತದಲ್ಲಿ ನಡೆದಿದ್ದ ಭೀಕರ ಪುಲ್ವಾಮಾ ದಾಳಿಯ ರೂವಾರಿಗಳಲ್ಲಿ ಒಬ್ಬನಾಗಿದ್ದ.
ಈತನನ್ನು ಭಾರತದ ಗೃಹ ವ್ಯವಹಾರಗಳ ಸಚಿವಾಲಯವು 2022ರಲ್ಲಿ ಉಗ್ರನೆಂದು ಘೋಷಿಸಿತ್ತು.
ಈತ 2019 ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯ ಸಮಯದಲ್ಲಿ ಓವರ್ ಗ್ರೌಂಡ್ ವರ್ಕರ್ ಆಗಿ ಕೆಲಸ ಮಾಡಿದ್ದ.
ಉಗ್ರ ಹಮ್ಜಾ ಬುರ್ಹಾನ್, ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆ ಅಲ್-ಬದರ್ ಜೊತೆ ಸಂಪರ್ಕ ಹೊಂದಿದ್ದ ಎನ್ನಲಾಗಿದ್ದು, ಆತ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಘಟನೆಯ ಪ್ರಚಾರ ಹಾಗೂ ನೇಮಕಾತಿ ಮಾಡುತ್ತಿದ್ದ ಎನ್ನಲಾಗಿದೆ.
ಅರ್ಜುಮಂದ್ ಗುಲ್ಜಾರ್ ದಾರ್ ಎಂಬ ಹೆಸರಿನ ಈತನನ್ನು ಪಾಕ್ ಆಕ್ರಮಿತ ಕಾಶ್ಮೀರದ ಮುಜಫರಾಬಾದ್ನಲ್ಲಿರುವ ಆತನ ಕಚೇರಿಯೊಳಗೆ ದಾಳಿ ಮಾಡಿ ಹತ್ಯೆ ಮಾಡಲಾಗಿದೆ.
ಪುಲ್ವಾಮಾದ ರತ್ನಿಪೋರಾ ಪ್ರದೇಶದ ಖಾರ್ಬತ್ಪೋರಾದಲ್ಲಿ ಜನಿಸಿದ ಬುರ್ಹಾನ್, ಉನ್ನತ ಶಿಕ್ಷಣ ಪಡೆಯುವ ನೆಪದಲ್ಲಿ 2017 ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ. ಆದರೆ, ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್-ಬದ್ರ್ ಸೇರಿಕೊಂಡು ಶೀಘ್ರದಲ್ಲೇ ಆ ಸಂಘಟನೆಯಲ್ಲಿ ಕಮಾಂಡರ್ ಹುದ್ದೆಗೆ ಏರಿದ್ದ.
ನಂತರ ಕಾಶ್ಮೀರಕ್ಕೆ ಹಿಂತಿರುಗಿದ ಆತ, ಸ್ಥಳೀಯ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುವ ಮತ್ತು ಅವರನ್ನು ಪ್ರಚೋದಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ.
