ಮೈಸೂರು : ಅಡುಗೆ ಅನಿಲ ಕೊರತೆ, ಪೆಟ್ರೋಲ್-ಡೀಸೆಲ್ ದರ ಒಂದೇ ವಾರದಲ್ಲಿ ಎರಡನೇ ಬಾರಿ ಏರಿಕೆಯಾಗಿರುವುದರಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ ಎಂದು ಕೆ ಆರ್ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಎಂ ಆರ್ ಹೊಯ್ಸಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತೈಲ ದರ ಏರಿಕೆಯಿಂದಾಗಿ ಸಾರಿಗೆ ವೆಚ್ಚ ಹೆಚ್ಚಿದೆ. ಆಹಾರ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮ ಕಂಗೆಟ್ಟಿದೆ. ಊಟ-ಉಪಹಾರ ದರ ಹೆಚ್ಚಳ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೊಯ್ಸಳ ಬೇಸರ ವ್ಯಕ್ತಪಡಿಸಿದ್ದಾರೆ.
ಜನರ ಗಮನ ಬೇರೆಡೆಗೆ ಸೆಳೆಯಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರವು, ನೀಟ್ ಪರೀಕ್ಷಾ ಹಗರಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ. ಇರಾನ್ ಬಿಕ್ಕಟ್ಟಿನಂತಹ ಜಾಗತಿಕ ಸವಾಲು ಹಾಗೂ ರೂಪಾಯಿ ಮೌಲ್ಯ ಕುಸಿತ ತಡೆಯುವಲ್ಲಿ ವಿದೇಶಾಂಗ ನೀತಿ ವಿಫಲವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
