ಮೈಸೂರು: ಶನಿವಾರ ಮುಂಜಾನೆ 3.30ರಿಂದ 5.30ರವರೆಗೆ ಸಾಂಸ್ಕೃತಿಕ ನಗರಿಯಲ್ಲಿ ಮಳೆ,ಗಾಳಿ ಅಬ್ಬರದೊಂದಿಗೆ ಗುಡುಗು,ಸಿಡಿಲು ಮೇರೆ ಮೀರಿತ್ತು.
ಗಂಟೆಗೆ 60-70 ಕಿ.ಮೀ ವೇಗದಲ್ಲಿ ಬೀಸಿದ ಗಾಳಿ ಸಹಿತ ಭಾರೀ ಮಳೆಗೆ ಮೈಸೂರು ನಗರ ತತ್ತರಿಸಿದೆ.
ಕೇವಲ ಮೂರು ಗಂಟೆಗಳ ಅವಧಿಯಲ್ಲಿ ನಗರದ ಶೇ.50ರಷ್ಟು ಪ್ರದೇಶದಲ್ಲಿ 25 ಹೆಚ್ಚು ಮರಗಳು ಧರೆಗುರುಳಿವೆ, ನೂರಾರು ಜಾಹೀರಾತು ಫಲಕಗಳು, ಸೈನ್ ಬೋರ್ಡ್ಗಳು ನೆಲಕಚ್ಚಿವೆ.
ಮೊದಲು ಮಧ್ಯರಾತ್ರಿ 12.20 ಕ್ಕೆ ಗುಡುಗು,ಸಿಡಿಲು ಸಹಿತ ಪ್ರಾರಂಭವಾದ ಮಳೆ ಸ್ವಲ್ಪ ಕಡಿಮೆಯಾಯಿತು.
ನಸುಕಿನ ಜಾವ 3 ರ ಸುಮಾರಿಗೆ ಆರಂಭವಾದ ಗಾಳಿ ಮಳೆ 5.30ರವರೆಗೂ ಅಬ್ಬರಿಸಿತು.
ವಿಜಯನಗರ, ಕುಕ್ಕರಹಳ್ಳಿ ಕೆರೆ ರಸ್ತೆ, ಬೋಗಾದಿ ರಸ್ತೆ, ಹುಣಸೂರು ರಸ್ತೆ, ವರ್ತುಲ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಬದಿಯಲ್ಲಿದ್ದ ಬೃಹತ್ ಮರಗಳು ಉರುಳಿವೆ.
ಕೆಲವೆಡೆ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ವಿದ್ಯುತ್ ಕಂಬಗಳು ವಾಲಿವೆ. ಹಾಗಾಗಿ ನಗರದ ಹಲವು ಬಡಾವಣೆಗಳಲ್ಲಿ ರಾತ್ರಿಯಿಡೀ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಮಹಾನಗರ ಪಾಲಿಕೆ, ಸೆಸ್ಕ್, ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಸುಕಿನ ಜಾವದಿಂದಲೇ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.
ಜೆಸಿಬಿ, ಕ್ರೇನ್ ಬಳಸಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಮುಖ್ಯ ರಸ್ತೆಗಳಲ್ಲಿ ಸಂಚಾರ ಸುಗಮಗೊಳಿಸುವುದು ಮೊದಲ ಆದ್ಯತೆಯಾಗಿದೆ. ಗಲ್ಲಿ ರಸ್ತೆಗಳಲ್ಲಿನ ಮರಗಳನ್ನು ಮಧ್ಯಾಹ್ನದೊಳಗೆ ತೆರವುಗೊಳಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಸಹಾಯವಾಣಿ:
ಮರ ಬಿದ್ದು ರಸ್ತೆ ಬಂದ್, ವಿದ್ಯುತ್ ಕಡಿತ ಸಮಸ್ಯೆಗಳಿಗೆ ಪಾಲಿಕೆಯ 24×7 ಸಹಾಯವಾಣಿ 0821-2418800 ಕರೆ ಮಾಡಬಹುದು ಎಂದು ಪಾಲಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
