ಮೈಸೂರು: ಗರಿಷ್ಠ ಚಿಲ್ಲರೆ ಬೆಲೆ (ಎಂ ಆರ್ ಪಿ) ಮುದ್ರಣದ ಮೇಲೆ ಮಿತಿ ವಿಧಿಸಲು ಶಾಸನ ರಚನೆ ಮಾಡಬೇಕೆಂದು
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಜಿಲ್ಲಾ ಘಟಕ ಒತ್ತಾಯಿಸಿದೆ.
ಶನಿವಾರ ವಿನೋಬ ರಸ್ತೆಯಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಎಬಿಜಿಪಿ ಸದಸ್ಯರು,
ಗರಿಷ್ಠ ಚಿಲ್ಲರೆ ಬೆಲೆ ಮುದ್ರಣದ ಮೇಲೆ ಮಿತಿ ವಿಧಿಸಲು ಶಾಸನ ರಚನೆಗೆ ಆಗ್ರಹಿಸಿ,
ಹೆಚ್ಚುವರಿ ಆಯುಕ್ತರಾದ ಶಿವರಾಜ್ ಅವರಿಗೆ ಮನವಿ ಸಲ್ಲಿಸಿದರು.
ವ್ಯಾಪಾರದಲ್ಲಿ ಪಾರದರ್ಶಕತೆ ತರಲು ವ್ಯಾಪಾರಿಗಳು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ಸಮತೋಲನಗೊಳಿಸಲು ಉತ್ಪನ್ನದ ಮೇಲೆ ಉತ್ಪನ್ನ ವೆಚ್ಚ ಮತ್ತು ಮಾರಾಟ ವೆಚ್ಚವನ್ನು ಕಡ್ಡಾಯವಾಗಿ ಮುದ್ರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್, ರಾಜ್ಯ ಶಿಕ್ಷಣ ಸಂಚಾಲಕರಾದ ಜಿ ವಿ ರವಿಶಂಕರ್, ಉಪಾಧ್ಯಕ್ಷರಾದ ವಿಕ್ರಂ ಅಯ್ಯಂಗಾರ್, ಪ್ರಾಂತ ಸದಸ್ಯರಾದ ಡಾ. ರಾಘವೇಂದ್ರ, ಕಾನೂನು ಸಲಹೆಗಾರರಾದ ಪುಷ್ಪ, ಕಾರ್ಯದರ್ಶಿ ಶ್ರೀಕಂಠೇಶ್, ಸದಸ್ಯರಾದ ದಯಾನಂದ ನಾಯಕ್ ಮತ್ತಿತರರು ಹಾಜರಿದ್ದರು.
