ಮೈಸೂರು: ಮೈಸೂರು ಜಿಲ್ಲೆಯಲ್ಲಿ ಜಮೀನಿನ ದುರಸ್ಥಿ ಆಂದೋಲನ ಹಮ್ಮಿಕೊಳ್ಳಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದ ಪದಾಧಿಕಾರಿಗಳು ಆಗ್ರಹಿಸಿದರು.
ಮೈಸೂರು ಪತ್ರಿಕಾ ಭವನದಲ್ಲಿ ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಡಾ.ಬಿ.ಶಿವಣ್ಣ ಮಾತನಾಡಿದರು.
ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು ರೈತಾಪಿ ವರ್ಗ.ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ, ಸರಗೂರು, ಪಿರಿಯಾಪಟ್ಟಣ, ನಂಜನಗೂಡು, ಹುಣಸೂರು, ಕೆ ಆರ್ ನಗರ, ಟಿ ನರಸೀಪುರ ತಾಲೂಕಿನಲ್ಲಿ ಸರ್ಕಾರ ಸಾಗುವಳಿಗೆ ಮಂಜೂರು ಮಾಡಿರುವ ಜಮೀನುಗಳನ್ನು ದುರಸ್ಥಿ ಮಾಡಿಕೊಡದೆ ರೈತರ ಕೋರಿಕೆಯನ್ನು ಗಣನೆಗೆ ಪಡೆಯದೇ ಇರುವುದು ರೈತರನ್ನು ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದೆ ಎಂದು ಹೇಳಿದರು.
ಸರ್ಕಾರವು ಕೂಡಲೇ ರೈತರ ಜಮೀನುಗಳನ್ನು ದುರಸ್ಥಿ ಮಾಡಿಕೊಡಬೇಕು ಎಂದು ಕರ್ನಾಟಕ ಪ್ರಜಾಪಾರ್ಟಿ (ರೈತ ಪರ್ವ) ವತಿಯಿಂದ ಆಗ್ರಹಿಲಾಯಿತು.
ಸಾವಿರಾರು ಎಕರೆ ಸರ್ಕಾರದ ಗೋಮಾಳದ ಜಮೀನಿನಲ್ಲಿ ಬೆಳೆದ ಗಿಡ-ಗಂಟೆಗಳನ್ನು ರೈತಾಪಿ ವರ್ಗದವರು ಕಿತ್ತು ಹಸನು ಮಾಡಿ ವ್ಯವಸಾಯ ಮಾಡಿಕೊಂಡು ಬಂದಿದ್ದಾರೆ. ಆ ಜಮೀನುಗಳನ್ನು ರೈತರ ಹೆಸರಿಗೆ ಅಧಿಕೃತ ದಾಖಲೆಗಳನ್ನು ಅಂದರೆ ಆರ್.ಟಿ.ಸಿ.ಗಳನ್ನು ಮಾಡಿಸಿಕೊಳ್ಳಲು ಕರ್ನಾಟಕ ಭೂಕಂದಾಯ ಕಾಯ್ದೆಯಡಿ ನಮೂನೆ-57 ಹಾಗೂ ನಮೂನೆ-53ರಲ್ಲಿ ಸಾಗುವಳಿಗಾಗಿ ಸುಮಾರು 50-60 ವರ್ಷಗಳಿಂದ ಸರ್ಕಾರಕ್ಕೆ ಅರ್ಜಿಗಳನ್ನು ಸಲ್ಲಿಸಿ ರೈತಾಪಿ ವರ್ಗದವರು ತಾಲ್ಲೂಕು ಕಚೇರಿಗೆ ಅಲೆದು ಸಾಕಾಗಿದ್ದಾರೆ ಎಂದು ತಿಳಿಸಿದರು.
ಆದರೆ ಸರ್ಕಾರ ರೈತರಿಗೆ ಸಾಗುವಳಿ ಮಂಜೂರಾದ ಜಮೀನುಗಳನ್ನು ದುರಸ್ಥಿ ಮಾಡದೇ ರೈತರುಗಳಿಂದ ಶುಲ್ಕ ಪಡೆದು ಅರ್ಜಿಗಳನ್ನು ಸ್ವೀಕರಿಸಿ ಸುಮ್ಮನೆ ಕಾಲಾಹರಣ ಮಾಡಿಕೊಂಡು ಬರುತ್ತಿದೆ ಎಂದು ಆರೋಪಿಸಿದರು.
ರೈತರ ಜಮೀನುಗಳನ್ನು ದುರಸ್ಥಿ ಮಾಡದೇ ಇರುವ ಕಾರಣ ಅವರ ಕುಟುಂಬದ ಸದಸ್ಯರು ಮತ್ತು ಮಕ್ಕಳಿಗೆ ದಾನ ಪತ್ರ, ಹಕ್ಕು ಬಿಡುಗಡೆ ಪತ್ರ. ವ್ಯವಸ್ಥಾ ಪತ್ರ, ವಿಭಾಗ ಪತ್ರ ಮಾಡಲಾಗದೇ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣ-ವಾಗಿದೆ.
ಸರ್ಕಾರ ನಾಮಕಾವಸ್ಥೆಗೆ ಮತ್ತು ಬೇಕಾಬಿಟ್ಟಿ ದುರಸ್ಥಿ ಕೆಲಸವನ್ನು ಮಾಡದೆ ಸಾಮೂಹಿಕವಾಗಿ ರೈತರ ಅಭ್ಯುದಯಕ್ಕಾಗಿ ಜಮೀನಿನ ದುರಸ್ಥಿ ಆಂದೋಲನಕ್ಕೆ ಕರೆ ಕೊಡಬೇಕು ಜಮೀನು ದುರಸ್ಥಿಮುಕ್ತ ರಾಜ್ಯವನ್ನಾಗಿ ಮಾಡಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ಆಗ್ರಹಿಸಿದರು.
ಇದಕ್ಕೆ ತಪ್ಪಿದ್ದಲ್ಲಿ ನಮ್ಮ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ರೈತರನ್ನು ಎಚ್ಚರಿಸುವ ದೃಷ್ಟಿಯಿಂದ ರಾಜ್ಯಾದ್ಯಂತ ಆಂದೋಲನ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರಾಜ್ಯಾಧ್ಯಕ್ಷ ಡಾ.ಬಿ.ಶಿವಣ್ಣ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರಜಾಪಾರ್ಟಿ ( ರೈತ ಪರ್ವ) ಮೈಸೂರು ಜಿಲ್ಲಾ ಅಧ್ಯಕ್ಷರಾದ ಕುಮಾರಸ್ವಾಮಿ, ಕಾನೂನು ಘಟಕದ ಅಧ್ಯಕ್ಷರಾದ ಪ್ರದೀಪ್ ಬಿಡ್ದನ್, ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು,ಹೆಚ್.ಎನ್ ಶಿವಕುಮಾರ್, ಕೃಷ್ಣ, ಮಂಜುನಾಥ್ ಭಾಗವಹಿಸಿದ್ದರು.
