ಮೈಸೂರು: ನೀಟ್ ಪರೀಕ್ಷೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ನಡೆದಿರುವುದು ಆತಂಕಕಾರಿ ಸಂಗತಿ ಎಂದು ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್ ಹೇಳಿದರು.
ನೀಟ್ ಪರೀಕ್ಷೆ ಫಲಿತಾಂಶ ಕೊಡುವಲ್ಲಿ ಮಾಫಿಯಾ ಸಕ್ರಿಯವಾಗಿರುವ ಸಾಧ್ಯತೆಗಳಿದ್ದು, ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಿ ಇದರಲ್ಲಿ ಶಾಮೀಲಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾ ಆಡಳಿತ ಕಚೇರಿಗೆ ತೆರಳಿ ಚಾಮುಂಡೇಶ್ವರಿ ಬಳಗದ ಸದಸ್ಯರು ಅಪರಾ ಜಿಲ್ಲಾಧಿಕಾರಿ ಐಶ್ವರ್ಯ ರವರಿಗೆ ಮನವಿ ಪತ್ರ ನೀಡಿದ ವೇಳೆ ಅವರು ಮಾತನಾಡಿದರು.
180 ಪ್ರಶ್ನೆಗಳಲ್ಲಿ ಸುಮಾರು 140 ಪ್ರಶ್ನೆಗಳು ಲೀಕ್ ಆಗಿವೆ ಎನ್ನುತ್ತಿರುವುದು ಆತಂಕ ಮೂಡಿಸಿದೆ. ಇದು ಬರೀ ಪರೀಕ್ಷಾ ಅಕ್ರಮವಲ್ಲ, ವಿದ್ಯಾರ್ಥಿಗಳ ಭವಿಷ್ಯದ ಕೊಲೆಯಾಗಿದೆ ಎಂದು ಹೇಳಿದರು.
ಇದು ಯುವಕರಿಗೆ ಮಾಡಿದ ಮಹಾದ್ರೋಹವಾಗಿದೆ, ವಿದ್ಯಾರ್ಥಿಗಳು ಹಸಿವು, ನಿದ್ರೆ ಎನ್ನದೆ ಓದಿದ್ದಾರೆ. ಅವರ ಪರಿಶ್ರಮ, ಕನಸುಗಳೆಲ್ಲವೂ ಹಣದ ಮಾಫಿಯಾ, ಅಧಿಕಾರ ದುರ್ಬಳಕೆಗೆ ಬಲಿಯಾಗಿವೆ ಎಂದು ವಿಷಾದಿಸಿದರು.
ಜೆಇಇ ಪರೀಕ್ಷೆ ಸುರಕ್ಷಿತವಾಗಿ
ನಡೆಯುತ್ತದೆ. ಆದರೆ ಆಗಾಗ್ಗೆ ನೀಟ್ ಪರೀಕ್ಷೆ ಮಾತ್ರ ಗೊಂದಲ, ಅಕ್ರಮದ ಗೂಡಾಗುತ್ತಿದೆ, ಇದು ನಿರ್ಲಕ್ಷ್ಯವೋ ಅಥವಾ ಉದ್ದೇಶಪೂರಿತವೋ ಎಂಬ ಅನುಮಾನ ಮೂಡುತ್ತಿದೆ. ಈ ರೀತಿ ದಿಢೀರ್ ಪರೀಕ್ಷೆ ರದ್ದು ಮಾಡಿ ಮತ್ತೆ ಪರೀಕ್ಷೆ ನಡೆಸಲು ಮುಂದಾದರೆ ಇದರ ನೇರ ಪರಿಣಾಮ ಪ್ರತಿಭಾನ್ವಿತ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಮೇಲಾಗುತ್ತದೆ ಎಂದು ತಿಳಿಸಿದರು.
ಪರೀಕ್ಷೆ ರದ್ದು ಬಗ್ಗೆ ತನಿಖೆ ಎಂದು ಹೇಳಿ ಕೈ ತೊಳೆದುಕೊಳ್ಳುವುದು ಸರಿಯಲ್ಲ. ತಕ್ಷಣ ತನಿಖೆ ನಡೆಸಿ ಸಂಪೂರ್ಣ ಮಾಫಿಯಾ ಬಯಲಿಗೆಳೆಯಬೇಕು. ಪ್ರಶ್ನೆಪತ್ರಿಕೆ ಲೀಕ್ ಮಾಡಿದವರು, ಖರೀದಿಸಿದವರು, ಅಧಿಕಾರಿ, ಮಧ್ಯವರ್ತಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕೆ ತುರ್ತು ಸಹಾಯವಾಣಿ ಮತ್ತು ಸಮಾಲೋಚನಾ ಕೇಂದ್ರ ಸ್ಥಾಪಿಸಬೇಕು ಎಂದು ನಜರಬಾದ್ ನಟರಾಜ್ ಆಗ್ರಹಿಸಿದರು
ಈ ಸಂದರ್ಭದಲ್ಲಿ ಲೋಕೇಶ್,ಕೃಷ್ಣಪ್ಪ (ಗಂಟಯ್ಯ),ಜಗದೀಶ್, ಜಯಕುಮಾರ್, ಮತ್ತಿತರರು ಹಾಜರಿದ್ದರು.
