ಹನೂರು: ತಾಲ್ಲೂಕಿನ ದಿನ್ನಳ್ಳಿ ರಸ್ತೆಯ ಸಮೀಪದ ಜಮೀನಿನಲ್ಲಿ ಕಾಡು ಹಂದಿ ದಾಳಿ ಮಾಡಿದ ಪರಿಣಾಮ ರೈತ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ರಾಮಾಪುರ ಸಮೀಪದ ಮಂಚಾಪುರ ನಿವಾಸಿ ಪಳನಿ ಗಾಯಗೊಂಡ ರೈತ.
ಪಳನಿ ಎಂಬವರು ತಮ್ಮ ತೋಟದ ಕೆಲಸಕ್ಕೆ ಹೋಗುತ್ತಿದ್ದಾಗ ಕಾಡು ಹಂದಿ ದಾಳಿ ಮಾಡಿದೆ.
ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆಯ ರಾಮಾಪುರ ವಲಯ ಅಧಿಕಾರಿ ಮಾದೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುವನ್ನು ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಿಸಿದರು.
ನಂತರ ಚಿಕಿತ್ಸೆಗೆ ಮೈಸೂರು ನಗರದ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಆತಂಕ ಹೆಚ್ಚಾಗಿದೆ ಹಾಗಾಗಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
