ಮೈಸೂರು: ಸಮಾಜದಲ್ಲಿ ಹಿರಿಯ ನಾಗರಿಕರ ಆರೈಕೆಗಾಗಿ ನವೀನ ಮಾದರಿಯನ್ನು ಪರಿಚಯಿಸುವ ಉದ್ದೇಶದಿಂದ ಹಾರ್ಟ್ ಸಂಸ್ಥೆ ವತಿಯಿಂದ ಹೃದಯ ಸ್ಪಂದನ ವೃದ್ಧರ ಆರೈಕೆ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
1.2022ರಂದು ಸ್ಥಾಪನೆಯಾದ ಹಾರ್ಟ್ ಸಂಸ್ಥೆ ಆರೋಗ್ಯ, ಶಿಕ್ಷಣ ಮತ್ತು ಪುನರ್ವಸತಿ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ವಿಶೇಷವಾಗಿ ಕುಟುಂಬದ ಆರೈಕೆಯಿಲ್ಲದ ಹಿರಿಯರು ಎದುರಿಸುತ್ತಿರುವ ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಸಮಸ್ಯೆಗಳ ತೀವ್ರತೆಯನ್ನು ಸಂಸ್ಥೆ ನೇರವಾಗಿ ಗುರುತಿಸಿದೆ.
ಹಾರ್ಟ್ ಸಂಸ್ಥೆ ಸಂಸ್ಥಾಪಕ ಶಿವಕುಮಾರ್ ಈ ಯೋಜನೆಯ ಬಗ್ಗೆ ಮಾತನಾಡಿ, ಹಿರಿಯರು ನಮ್ಮ ಸಮಾಜದ ಅಮೂಲ್ಯ ಸಂಪತ್ತು. ಅವರನ್ನು ನಿರ್ಲಕ್ಷಿಸುವ ಬದಲು, ಅವರ ಅನುಭವ ಮತ್ತು ಭಾವನೆಗಳನ್ನು ಗೌರವಿಸಿ, ಕುಟುಂಬದೊಂದಿಗೆ ಮರುಸಂಪರ್ಕ ಸಾಧಿಸಿ ಸಾಮರಸ್ಯಯುಕ್ತ ಕುಟುಂಬದ ಮರು ಸ್ಥಾಪನೆಗೆ ನಮ್ಮ ಸಂಸ್ಥೆಯ ಈ ಪ್ರಯತ್ನ ನೆರವಾಗುವುದು ಎಂದು ಹೇಳಿದ್ದಾರೆ.
ಮೈಸೂರು ನಗರದ ರಿಂಗ್ ರೋಡ್ ಸಮೀಪದ ಕೋಟೆಹುಂಡಿಯಲ್ಲಿ ಹೃದಯ ಸ್ಪಂದನ ವೃದ್ಧಾಶ್ರಮವನ್ನು ಸ್ಥಾಪಿಸಲಾಗಿದೆ, ಈ ಕೇಂದ್ರವು ಕೇವಲ ಆಶ್ರಯ ನೀಡುವ ವೃದ್ಧಾಶ್ರಮವಾಗಿರದೆ, ಹಿರಿಯ ನಾಗರಿಕರ ಸಂಪೂರ್ಣ ಕಲ್ಯಾಣವನ್ನು ಗುರಿಯಾಗಿಸಿಕೊಂಡ ಮಾದರಿ ಕೇಂದ್ರವಾಗಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವೃದ್ಧಾಶ್ರಮದಲ್ಲಿ ಸುರಕ್ಷಿತ ವಸತಿ, ಪೌಷ್ಟಿಕ ಆಹಾರ, ಮೂಲಭೂತ ಆರೋಗ್ಯ ಸೇವೆಗಳು ಹಾಗೂ ಭಾವನಾತ್ಮಕ ಬೆಂಬಲವನ್ನು ಒದಗಿಸುವುದರ ಜೊತೆಗೆ, ವಿಶೇಷವಾಗಿ ಕುಟುಂಬ ಸದಸ್ಯರು ಮತ್ತು ಹಿರಿಯ ನಾಗರಿಕರ ನಡುವಿನ ಸಂಬಂಧವನ್ನು ಪುನರ್ಸ್ಥಾಪಿಸುವತ್ತ ಹೆಚ್ಚಿನ ಒತ್ತು ನೀಡಲಾಗಿದೆ.
ಪ್ರವೇಶದ ನಂತರ ಕುಟುಂಬದ ಸದಸ್ಯರು ಮತ್ತು ವೃದ್ಧರ ನಡುವೆ ಸಮಾಲೋಚನೆ ನಡೆಸುವ ಮೂಲಕ ಅವರ ನಡುವೆ ಉಂಟಾದ ಅಂತರವನ್ನು ಕಡಿಮೆ ಮಾಡಿ, ಪರಸ್ಪರ ಅರಿವು ಹಾಗೂ ಪ್ರೀತಿ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತದೆ.
ಹಿರಿಯ ನಾಗರಿಕರು ಗೌರವಯುತ ಹಾಗೂ ಸಂತೋಷಕರ ಜೀವನವನ್ನು ನಡೆಸಲು ಅಗತ್ಯವಾದ ಮಾನಸಿಕ ಮತ್ತು ಸಾಮಾಜಿಕ ಬೆಂಬಲವನ್ನು ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಹೃದಯ ಸ್ಪಂದನ ವೃದ್ಧರ ಆರೈಕೆ ಕೇಂದ್ರವು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಲಪಡಿಸುವತ್ತ ಒಂದು ಮಹತ್ವದ ಹೆಜ್ಜೆಯಾಗಿದ್ದು, ಸಾರ್ವಜನಿಕರು, ದಾನಿಗಳು ಮತ್ತು ಸಾಮಾಜಿಕ ಸಂಘಟನೆಗಳು ಈ ಕೇಂದ್ರಕ್ಕೆ ಬೆಂಬಲ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹೃದಯ ಸ್ಪಂದನ ಹಿರಿಯರ ಆರೈಕೆ ಕೇಂದ್ರ,
ಹಾರ್ಟ್ ಸಂಸ್ಥೆ, ಮಾನಂದವಾಡಿ ರಸ್ತೆ, ರಿಂಗ್ ರೋಡ್ ಹತ್ತಿರ, ಕೋಟೆಹುಂಡಿ (ಹಾಲಾಳು) ಮೈಸೂರು 570008
ದೂರವಾಣಿ ಸಂಖ್ಯೆ: 9353630903, ಇಮೇಲ್: heartorganisation2022@gmail.comq ಸಂಪರ್ಕಿಸಬಹುದು.
