ಬೆಂಗಳೂರು: ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿರುವ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ನೆಲಕಚ್ಚಲಿದೆ ಎಂಬುದು ಸ್ಪಷ್ಟ ವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿಯ ಆಡಳಿತಕ್ಕಾಗಿ ಹಾಗೂ ದೇಶದ ಸುಭದ್ರತೆಗಾಗಿ ಜನರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ,ಆದರೆ ಈ ಚುನಾವಣಾ ಫಲಿತಾಂಶದಿಂದ ದೇಶದಲ್ಲಿ ಕಾಂಗ್ರೆಸ್ ಮುಕ್ತವಾಗುವ ಲಕ್ಷಣ ಕಂಡುಬಂದಿದೆ ಎಂದು ಹೇಳಿದ್ದಾರೆ.
ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ದೇಶವನ್ನು ಭದ್ರವಾಗಿ ಇಡಲು ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ ಎಂದು ಮತದಾರರು ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.
ಮುಖ್ಯವಾಗಿ ಪಶ್ಚಿಮ ಬಂಗಾಳದಲ್ಲಿ ಆಗಿರುವ ದೊಡ್ಡ ಬದಲಾವಣೆಯ ಬಗ್ಗೆ ಎಲ್ಲ ಕಡೆ ಚರ್ಚೆ ನಡೆಯುತ್ತಿದೆ. ಪಶ್ಚಿಮ ಬಂಗಾಳವನ್ನು ಭಯೋತ್ಪಾದಕರ ಹೆಬ್ಬಾಗಿಲಾಗಿಸಿದ, 2 ಕೋಟಿ ಬಾಂಗ್ಲಾ ವಲಸಿಗರಿಗೆ ಗುರುತಿನ ಚೀಟಿ ಕೊಟ್ಟ ಮಮತಾ ಬ್ಯಾನರ್ಜಿ ಅವರ ರಾಜಕೀಯ ಬದುಕು ಅಂತ್ಯಗೊಂಡಿದೆ ಎಂದು ಅಶೊಇಕ ಹೇಳಿದರು.
ದೇಶದ ಭದ್ರತೆಗೆ ಪ್ರಧಾನಿ ನರೇಂದ್ರ ಮೋದಿಯೇ ಸೂಕ್ತ ಎಂದು ಜನರು ತೀರ್ಮಾನಿಸಿದ್ದಾರೆ. ಅಲ್ಲಿ ಪ್ರತಿ ದಿನ ಟಿಎಂಸಿ ಗೂಂಡಾಗಳು ಜನರ ಮೇಲೆ, ಅಧಿಕಾರಿಗಳ ಮೇಲೆ ಹಲ್ಲೆ ಮಾಡುತ್ತಿದ್ದರು. ಅಂತಹ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ದೇಶವಾಗಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ದೇಶವಿರೋಧಿ ಚಟುವಟಿಕೆ ಮಾಡುವವರನ್ನು, ದೇಶದ್ರೋಹಿಗಳನ್ನು ದೇಶದಿಂದ ಹೊರಕ್ಕೆ ಹಾಕಲು ಮತದಾರರ ಪಟ್ಟಿಯ ಪರಿಷ್ಕರಣೆ ನೆರವಾಗುತ್ತದೆ. ಅಂಥವರು ದೇಶದಿಂದ ಹೊರಗೆ ಹೋದಾಗಲೇ ದೇಶ ಸಮೃದ್ಧವಾಗುತ್ತದೆ. ನಿಜವಾದ ಮತದಾರರು ದೇಶದ ಅಭಿವೃದ್ಧಿಗೆ ಮತ ನೀಡುತ್ತಾರೆ. ಹೊರಗಿನ ದೇಶದವರು ಇದ್ದರೆ, ದೇಶದ್ರೋಹಿ ಕೆಲಸ ಮಾಡುವ ಪಕ್ಷಕ್ಕೆ ಮತ ನೀಡುತ್ತಾರೆ. ಮತದಾರರ ಪಟ್ಟಿಯ ಪರಿಷ್ಕರಣೆ ಸರಿಯಾಗಿ ನಡೆದಿದೆ. ಬೆಂಗಳೂರಿನಲ್ಲೂ ಹೀಗೆಯೇ ನಡೆಯುತ್ತಿದೆ. ರಾಮನಗರ, ಚನ್ನಪಟ್ಟಣ ಮೊದಲಾದ ಭಾಗಗಳಿಂದ ಬೆಂಗಳೂರಿಗೆ ಬಂದು ಮತ ಚಲಾಯಿಸುತ್ತಾರೆ. ಮತದಾರರ ಪಟ್ಟಿ ಪರಿಷ್ಕರಣೆಯಿಂದ ಬಿಜೆಪಿಗೆ ಲಾಭವೇ ನಷ್ಟವೇ ಎನ್ನುವ ಪ್ರಶ್ನೆಯೇ ಬರುವುದಿಲ್ಲ. ಇದು ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿದ್ದು, ಈ ಪ್ರಕ್ರಿಯೆಯಿಂದ ದೇಶಕ್ಕೆ ಲಾಭವಾಗುತ್ತದೆ ಎಂದು ಹೇಳಿದರು
ಅಸ್ಸಾಂ, ಪುದುಚೇರಿ, ಪಶ್ಚಿಮ ಬಂಗಾಳ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪಾಠ ಕಲಿಯಬೇಕಿದೆ.
ಕರ್ನಾಟಕದಲ್ಲಿ ಉಪಚುನಾವಣೆ ಸಿಂಪತಿ ಮೇಲೆ ನಡೆದಿದೆ. ಶಾಸಕರು ನಿಧನರಾಗಿದ್ದರಿಂದ ಆ ದಯೆಯ ಮೇಲೆ ಮತ ಕೇಳಲಾಗಿದೆ. ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಬಿಜೆಪಿಗೆ ಜನರಿಂದ ಉತ್ತಮ ಬೆಂಬಲ ಸಿಕ್ಕಿದೆ. ಕಾಂಗ್ರೆಸ್ನಲ್ಲಿ ಆಗಿರುವ ಒಡಕಿನಿಂದ ಬಿಜೆಪಿಗೆ ಯಾವುದೇ ಲಾಭವಿಲ್ಲ. ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಅನ್ಯಾಯ ಮಾಡುತ್ತಿದೆ ಎಂದು ಈಗಾದರೂ ಗೊತ್ತಾಗಿದೆ. ಈ ಬಗ್ಗೆ ಮುಸ್ಲಿಮರಲ್ಲಿ ಹೆಚ್ಚು ಅರಿವು ಮೂಡಬೇಕಿದೆ ಎಂದು ಹೇಳಿದರು
ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಾಗೂ ಬಿಜೆಪಿಯ ಮುಖಂಡರು, ಕಾರ್ಯಕರ್ತರ ಒಟ್ಟಾದ ಶ್ರಮದಿಂದಾಗಿ ಕಮಲ ಇನ್ನಷ್ಟು ಅರಳಿ ಬಲವಾಗಿದೆ. ಚುನಾವಣೆಯಲ್ಲಿ ಶ್ರಮಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಅಶೋಕ್ ತಿಳಿಸಿದರು.
