ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಪರಿಣಾಮ 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಶುಕ್ರವಾರ ಮಲೆ ಮಹದೇಶ್ವರ ಸ್ವಾಮಿಯ ದರ್ಶನ ಪಡೆದು ಕೊಳ್ಳೇಗಾಲ ಹಾಗೂ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಲ್ಲಿ 50 ಜನ ಪ್ರಯಾಣಿಕರು ತೆರಳುತ್ತಿದ್ದರು. ತಾಳುಬೆಟ್ಟದ ಸಮೀಪದ ಎರಡನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಲಭಾಗಕ್ಕೆ ಪಲ್ಟಿಯಾಗಿದೆ. ಇದರಿಂದ ಬಲಭಾಗದಲ್ಲಿ ಕುಳಿತಿದ್ದ 30ಕ್ಕೂ ಹೆಚ್ಚು ಜನರಿಗೆ ತಲೆ, ಕೈ ಕಾಲು ಹೊಟ್ಟೆ ಎದೆ, ಮೂಗು ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಾಯಗಳಾಗಿದೆ.
ಕೌದಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೈಸೂರು ಮೂಲದ ಮುತ್ತು ಮಣಿ (40), ಬಸವರಾಜು (52) ಮೇಘನ (27) ರಾಜಶೇಖರ್ (39) ಶಿವರಾಜು (65) ಶೈಲಜಾ (50) ಸಿದ್ದ ಮಲ್ಲು (40) ಅವರು ಚಿಕಿತ್ಸೆ ಪಡೆದುಕೊಂಡರು.
ನಿರ್ವಾಹಕಿ ಪದ್ಮಾವತಿಗೆ ತಲೆಗೆ ತೀವ್ರ ಗಾಯವಾಗಿದ್ದು ಹನೂರಿನಲ್ಲಿ, ದ್ರಾಕ್ಷಾಯಿಣಿ ಮದುವನಹಳ್ಳಿ, ದ್ರಾಕ್ಷಾಯಿಣಿ ಮೈಸೂರು, ಮಧು ಮೈಸೂರು, ಸುಂದರಮ್ಮ ಸಿದ್ದಯ್ಯನಪುರ,ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ವರುಣ್ (10)ನಂಜನಗೂಡು,ಜಯಲಕ್ಷ್ಮಿ (71)ಟಿ. ನರಸೀಪುರ, ಪಲ್ಲವಿ (30)ನಂಜನಗೂಡಿನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಬಸ್ ಉರುಳಿದ ವಿಚಾರ ತಿಳಿಯುತ್ತಿದ್ದಂತೆ ಸಾರ್ವಜನಿಕರು 108 ತುರ್ತು ಆಂಬುಲೆನ್ಸ್ ಗೆ ದೂರವಾಣಿ ಕರೆ ಮಾಡಿದ್ದಾರೆ ಆದರೆ ಯಾವುದೇ ಸ್ಪಂದನೆ ಸಿಗದ ಕಾರಣ ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಆರ್ ಮಂಜುನಾಥ್ ಅವರಿಗೆ ವಿಚಾರ ತಿಳಿಯುತ್ತಿದ್ದಂತೆ ಡಿಎಚ್ಒ ಡಾ. ಚಿದಂಬರ ಅವರ ಜೊತೆ ಮಾತನಾಡಿ ಮಲೆ ಮಹದೇಶ್ವರ ಬೆಟ್ಟದಲ್ಲಿನ ಎರಡು ಆಂಬುಲೆನ್ಸ್ ಗಳು 108 ಆಂಬುಲೆನ್ಸ್ ಗಳ ವ್ಯವಸ್ಥೆ ಮಾಡಿ ಗಾಯಾಳುಗಳಿಗೆ ಸ್ಪಂದಿಸಿದ್ದಾರೆ.
ಕಳೆದ ಒಂದು ವಾರದಲ್ಲಿ ನಾಲ್ಕು ಅಪಘಾತಗಳಾಗಿವೆ ಎಲ್ಲಾ ಅಪಘಾತದ ಸಂದರ್ಭಗಳಲ್ಲಿಯೂ ಸಮರ್ಪಕ ಆಂಬುಲೆನ್ಸ್ ವ್ಯವಸ್ಥೆ ಗಳು ಇಲ್ಲದೆ ತೊಂದರೆ ಅನುಭವಿಸಿದ್ದಾರೆ.
