ಮೈಸೂರು: ಮಿನಿ ದಸರಾ ಎಂದೇ ಪ್ರಸಿದ್ಧಿಯಾಗಿರುವ ಸಾಂಸ್ಕೃತಿಕ ನಗರಿ ಮೈಸೂರಿನ ಮೆರುಗು ಹೆಚ್ಚಿಸುವ ಆಚರಣೆಗಳಲ್ಲಿ ಮೈಸೂರು ಕರಗ ಮಹೋತ್ಸವ ಕೂಡ ಒಂದು.
ಬೆಂಗಳೂರಿನ ಕರಗದಂತೆಯೇ ರಾಜ್ಯಾದ್ಯಂತ ಖ್ಯಾತಿ ಪಡೆದಿರುವ ಈ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹೋತ್ಸವಕ್ಕೆ, ಮೈಸೂರಿನ ಇಟ್ಟಿಗೆಗೂಡಿ ನಲ್ಲಿರುವ ಮಾರಮ್ಮ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಚಾಲನೆ ದೊರೆಯಿತು.
ಇತಿಹಾಸ ಪ್ರಸಿದ್ಧವಾದ ೧೦೨ನೇ ವರ್ಷದ ಮೈಸೂರಿನ ಕರಗ ಮಹೋತ್ಸವದ ಅದ್ಧೂರಿ ಮೆರವಣಿಗೆ ಶನಿವಾರ ರಾತ್ರಿ ದೇವಸ್ಥಾನದಿಂದ ಹೊರಟು ನಗರದ ಪ್ಯಾಲೆಸ್ ಆಫೀಸ್ ರಸ್ತೆ, ನೂರಡಿ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ನಲ್ಲಪ್ಪ ಠಾಣಾ ರಸ್ತೆ, ಶಿವರಾಂಪೇಟೆ, ಸಯ್ಯಾಜಿರಾವ್ ರಸ್ತೆ, ಮಿಷನ್ ಆಸ್ಪತ್ರೆ ರಸ್ತೆ, ಕಬೀರ್ ರಸ್ತೆ, ಕಾಳಮ್ಮ ಗುಡಿ ರಸ್ತೆ, ಇರ್ವಿನ್ ರಸ್ತೆ, ಕುರುಬಗೇರಿ, ಕುಂಬಾರಗೇರಿ, ಅಶೋಕ ರಸ್ತೆ, ನಜರಬಾದ್, ಮೃಗಾಲಯ ರಸ್ತೆ ಮಾರ್ಗವಾಗಿ ಸಾಗಿ ಇಂದು ಬೆಳಗ್ಗೆ ದೇವಸ್ಥಾನಕ್ಕೆ ಹಿಂತಿರುಗಿತು.
ಕರಗ ಮಹೋತ್ಸವ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿತು. ಮೆರವಣಿಗೆಗೆ ವೀರಗಾಸೆ, ಕಂಸಾಳೆ, ಡೊಳ್ಳು, ತಮಟೆ, ಗಾರುಡಿ ಗೊಂಬೆ, ನಾದಸ್ವರ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರುಗು ನೀಡಿದವು.
ಮೈಸೂರು ಕರಗ ಮಹೋತ್ಸವವು ಕೇವಲ ಧಾರ್ಮಿಕ ಕಾರ್ಯಕ್ರಮವಷ್ಟೇ ಅಲ್ಲ, ಇದು ಸಾಂಸ್ಕೃತಿಕ ಮತ್ತು ಸಾವಾಜಿಕ ಸೌಹಾರ್ದತೆಯ ಸಂಕೇತವಾಗಿದೆ.
ಈ ಉತ್ಸವವು ಸ್ಥಳೀಯ ಜನರನ್ನು ಒಗ್ಗೂಡಿಸುವುದರ ಜತೆಗೆ, ಪರಂಪರೆಯನ್ನು ಉಳಿಸಿ-ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.
ಕರಗದ ಸಂದರ್ಭದಲ್ಲಿ ಸಾಂಪ್ರದಾಯಿಕ ಕಲೆಗಳು, ನೃತ್ಯ, ಸಂಗೀತ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ. ಇದು ಯುವ ಜನಾಂಗಕ್ಕೆ ತಮ್ಮ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಅವಕಾಶವನ್ನು ಒದಗಿಸುತ್ತದೆ.
ಕರಗ ಮಹೋತ್ಸವದ ಅಂಗವಾಗಿ ಶನಿವಾರ ಅನ್ನ ಸಂತರ್ಪಣೆ ನಡೆಯಿತು. ಸುಮಾರು ೧೦ ಸಾವಿರ ಭಕ್ತಾದಿಗಳು ಪ್ರಸಾದ ಸ್ವೀಕರಿಸಿದರು ಎಂದು ಮುನೇಶ್ವರ ಸ್ವಾಮಿ ದೇವಸ್ಥಾನದ ಆರ್ಚಕರಾದ ಕಾರ್ತೀಕ್ ತಿಳಿಸಿದರು.
ಭಾನುವಾರ ಮಧ್ಯಾಹ್ನ ೧೨ ಗಂಟೆಗೆ ಅಂಬಲಿ ಪೂಜೆ ನಡೆದ ನಂತರ ಆರಿಶಿನ ನೀರಿನ ಓಕುಳಿ ಆಡಲು ಕರಗವು ದೇವಸ್ಥಾನದಿಂದ ಹೊರಡುವುದು.
ಸಂಜೆ ೪ ಗಂಟೆಯಿಂದ ಭಕ್ತಾದಿಗಳಿಂದ ತಂಬಿಟ್ಟು ಆರತಿ ನೆರವೇರಲಿದೆ. ರಾತ್ರಿ ೭ ಗಂಟೆಗೆ ಕರಗವು ದೇವಸ್ಥಾನದಿಂದ ಹೊರಟು ಇಟ್ಟಿಗೆಗೂಡಿನ ಎಲ್ಲಾ ಬೀದಿಗಳಲ್ಲಿ ಆರತಿ ಪೂಜೆ ಸ್ವೀಕರಿಸಿ ದೇವಸ್ಥಾನ ತಲುಪುವುದು. ರಾತ್ರಿ ೧೨ ಗಂಟೆಗೆ ನೈವೇದ್ಯದೊಂದಿಗೆ ಮಹಾಮಂಗಳಾರತಿ ನೆರವೇರಲಿದೆ.
ನಾಳೆ ಸೋಮವಾರ ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಪಶ್ವಿಮವಾಹಿನಿಯಲ್ಲಿ ಕರಗವನ್ನು ವಿಸರ್ಜಿಸಲಾಗುವುದು.
