ಕೊಡಗು: ಅಮೆರಿಕ ಮೂಲದ ಮಹಿಳೆ ಮೇಲೆ ಜಾರ್ಖಂಡ್ ಮೂಲದ ವ್ಯಕ್ತಿ ಹೋಂಸ್ಟೇನಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಹೇಯ ಘಟನೆ ವಿರಾಜಪೇಟೆಯ ಕುಟ್ಟ ಗ್ರ ಪಂ ವ್ಯಾಪ್ತಿಯಲ್ಲಿ ನಡೆದಿದೆ.
ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಹಾಗೂ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಹಿನ್ನೆಲೆ ಹೋಂಸ್ಟೇ ಮಾಲೀಕ ವಿಶಾಲ್ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಮೇ 3ರ ವರೆಗೂ ನ್ಯಾಯಾಂಗ ಬಂಧನಲ್ಲಿಡಲು ಆದೇಶಿಸಲಾಗಿದೆ.
3ದಿನ ವೈಫೈ ಕಟ್ ವಾಶಿಂಗ್ಟನ್ ಮೂಲದ ಸಂತ್ರಸ್ತೆ ಮಹಿಳೆ ಕೊಡಗಿನ ಕುಟ್ಟ ಗ್ರಾಮದ ದೇವಿ ವಿಲ್ಲಾ ಹೋಂಸ್ಟೇನಲ್ಲಿ ತಂಗಿದ್ದರು. ಈ ವೇಳೆ ಆರೋಪಿ ವೃಜೇಶ್ ಕುಮಾರ್ ಸಿಹಿ ಪಾನಕಕ್ಕೆ ಮತ್ತು ಬರುವ ಔಷಧಿ ಬೆರೆಸಿ ಕೊಟ್ಟು ಬಳಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ವಿಚಾರ ತಿಳಿದು ಮೂರು ದಿನ ಸಂತ್ರಸ್ತೆ ಯಾರನ್ನೂ ಸಂಪರ್ಕಿಸದಿರಲು ವೈಫೈ ಕಟ್ ಮಾಡಿ ಹೋಂಸ್ಟೇ ಮಾಲೀಕ ವಿಶಾಲ್ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೂರು ದಿನದ ಬಳಿಕ ಮೈಸೂರಿಗೆ ಹೋಗುವುದಾಗಿ ವಿದೇಶಿ ಸಂತ್ರಸ್ತೆ ಹೊರಟು, ಅಮೆರಿಕದಲ್ಲಿರುವ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾರೆ.
ಅಮೆರಿಕದ ಅಧಿಕಾರಿಗಳು ಮೈಸೂರಿನಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಇಮೇಲ್ ಮೂಲಕ ಸಂಪರ್ಕಿಸಿದ್ದು, ಅಲ್ಲಿನ ಅಧಿಕಾರಿಗಳ ಸೂಚನೆ ಮೇರೆಗೆ ಪ್ರಕರಣ ದಾಖಲು ಮಾಡಲಾಗಿದೆ.
ಅಲ್ಲದೆ ಮಂಗಳವಾರ ಜಿಲ್ಲೆಗೆ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಭೇಟಿ ನೀಡಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಎಸ್ಪಿ ಬಿಂದುಮಣಿ ಪ್ರತಿಕ್ರಿಯಿಸಿದ್ದು, ಕುಟ್ಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಪ್ರಕರಣ ದಾಖಲಾಗಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ,ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
