ಮೈಸೂರು: ಜೈ ಶ್ರೀರಾಮ ಎನ್ನುವುದು ಪೂರ್ವಜರ ಕಾಲದಿಂದ ಹೇಳಲಾಗುತ್ತಿದೆ. ಇದನ್ನು ರಾಜಕೀಯವಾಗಿ ಹಾಗೂ ಬೇರೆ ಬೇರೆ ರೀತಿ ಬಳಸುವುದು ಸರಿಯಲ್ಲ, ಶ್ರೀರಾಮ ಎಲ್ಲರಿಗೂ ಒಂದೇ ಎಂದು ಶಾಸಕ ಕೆ. ಹರೀಶ್ ಗೌಡ ಹೇಳಿದರು.
ಕೆಆರ್ಎಸ್ ರಸ್ತೆ ರೈಲ್ವೆ ಮೈದಾನ ಎದುರಿನ ಆಂಜನೇಯಸ್ವಾಮಿ ದೇವಸ್ಥಾನ ಸಮೀಪ ಇರುವ ನವೀಕೃತಗೊಂಡಿರುವ ಸತ್ಯಪ್ರಮೋದ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯಾವುದೇ ಗ್ರಾಮಕ್ಕೆ ಹೋದರೂ ಶ್ರೀರಾಮಮಂದಿರ ಇರುತ್ತದೆ, ಕೆ.ಜಿ. ಕೊಪ್ಪಲಿನಲ್ಲಿ ನಮ್ಮ ಪೂರ್ವಿಕರು ರಾಮಮಂದಿರ ಕಟ್ಟಿಸಿದ್ದಾರೆ. ಶ್ರೀರಾಮನನ್ನು ಸೂರ್ಯ ಚಂದ್ರ ಇರುವರೆಗೂ ನೆನಸಿಕೊಳ್ಳುತ್ತೇವೆ. ದೇವರ ಮೇಲೆ ಅಪಾರ ಭಕ್ತಿ ನಮಗೂ ಇದೆ ಎಂದು ಹೇಳಿದರು.
ನಾವು ಚಿಕ್ಕ ವಯಸ್ಸಿನಿಂದ ರಾಮ, ಕೃಷ್ಣ, ಶಿವ ದೇವರು ಸೇರಿದಂತೆ ನಾನಾ ದೇವರ
ಬಗ್ಗೆ ಹೇಳಿದ್ದೇವೆ. ಅಲ್ಲದೇ, ಮಕ್ಕಳಿಗೂ ಹೇಳಿ ಬೆಳೆಸುತ್ತೇವೆ. ಭರತ ಖಂಡದ ಸಂಸ್ಕಾರದಲ್ಲಿ ದೇವರನ್ನು ನಂಬುತ್ತಾರೆ. ಆಧ್ಯಾತ್ಮಿಕ ನಮಗೆ ಕೂಡ ಇದೆ. ಭಗವಂತ ಇಲ್ಲದೇ ನಾವು ಯಾರು ಇಲ್ಲ ಎಂದು ತಿಳಿಸಿದರು.
ಉತ್ತರಾದಿ ಮಠವು ಲೋಕ ಕಲ್ಯಾಣಕ್ಕಾಗಿ ಯಾವುದೇ ಕೆಲಸ ಮಾಡಿದರೆ, ತಾವು ಕೂಡ ಸಹಕಾರ ನೀಡುವುದಾಗಿ ಹರೀಶ್ ಗೌಡ ಭರವಸೆ ನೀಡಿದರು.
ಕಲ್ಯಾಣ ಮಂಟಪವನ್ನು ಸತ್ಯಾಧ್ಯಾನಾಚಾರ್ಯ ಕಟ್ಟಿ ಉದ್ಘಾಟಿಸಿದರು.
ಉತ್ತರಾದಿ ಮಠದ ವಿದ್ಯಾಧೀಶಾಚಾರ್ಯ ಗುತ್ತಲ್, ಆದ್ಯ ಗೋವಿಂದಾಚಾರ್ಯ, ಉತ್ತರಾದಿ ಮಠದ ದಿವಾನ ಶಶಿಧರಾಚಾರ್ಯ, ಆಡಳಿತಾಧಿಕಾರಿ ಆನಂದತೀರ್ಥಾಚಾರ್ಯ ಚಿಮ್ಮಲಗಿ, జంటి ಆಡಳಿತಾಧಿಕಾರಿ ಪಂಡುರಂಗಾಚಾರ್ಯ ರೊಟ್ಟಿ, ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಎನ್. ಎಂ. ನವೀನ್ ಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭರತ್, ಜಗನ್ನಾಥ ಶೆಣೈ, ಮಹೇಶ್ ಕಾಮತ್, ವಾಸುದೇವಮೂರ್ತಿ, ವಿಕ್ರಂ ಅಯ್ಯಂಗಾರ್, ಪ್ರಮೋದಾಚಾರ್ಯ, ಅಜಯ್ ಶಾಸ್ತ್ರಿ ಮತ್ತಿತರರು ಹಾಜರಿದ್ದರು.
