ಬೆಂಗಳೂರು: ರಾಜ್ಯದಲ್ಲಿ ಬರಗಾಲದ ಕರಿನೆರಳು ಕಾಡುತ್ತಿದೆ ಆದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಕುರ್ಚಿ ಕಿತ್ತಾಟದ ತೆವಲು ಎಂದು ಪ್ರತಿಪಕ್ಷ ನಾಯಕ ಅಶೋಕ್ ಟೀಕಾಪ್ರಹಾರ ನಡೆಸಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮಳೆ ಅಭಾವದ ಮುನ್ಸೂಚನೆ ಹಾಗೂ ಅಂತರ್ಜಲ ಮಟ್ಟದ ತೀವ್ರ ಕುಸಿತದ ವರದಿಗಳು ಆತಂಕಕಾರಿಯಾಗಿವೆ. ಕರುನಾಡು ಬರದ ದವಡೆಗೆ ಸಿಲುಕುತ್ತಿರುವ ಈ ಸಂಕಷ್ಟದ ಸಮಯದಲ್ಲಿ, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಆಡಳಿತವನ್ನು ಗಾಳಿಗೆ ತೂರಿ ಕುರ್ಚಿಗಾಗಿ ದೆಹಲಿ ಪ್ರವಾಸದಲ್ಲಿ ಮಗ್ನರಾಗಿರುವುದು ಅತ್ಯಂತ ದುರದೃಷ್ಟಕರ ಎಂದು ಟ್ವೀಟ್ ಮಾಡಿ ಅಶೋಕ್ ಕಿಡಿಕಾರಿದ್ದಾರೆ.
ಮುಂಗಾರು ಕೊರತೆಯ ದುಷ್ಪರಿಣಾಮಗಳು ಅನ್ನದಾತರನ್ನು ಮತ್ತು ಸಾರ್ವಜನಿಕರನ್ನು ಸಂಕಷ್ಟಕ್ಕೆ ದೂಡುವ ಮುನ್ನ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಗಳು ಮತ್ತು ಸಲಹೆಗಳ ನ್ನು ನೀಡುತ್ತದ್ದೇನೆ ಎಂದು ಅವರು ಬರೆದಿದ್ದಾರೆ.
ಮಳೆಯ ಅನಿಶ್ಚಿತತೆಯ ಲಾಭ ಪಡೆದು ರೈತರನ್ನು ಲೂಟಿ ಮಾಡಲು ಕಾಳಸಂತೆಕೋರರು ಹೊಂಚು ಹಾಕುತ್ತಿದ್ದಾರೆ. ಸರ್ಕಾರ ಕೂಡಲೇ ಪ್ರತಿ ಜಿಲ್ಲೆಯ
ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು. ಯಾವುದೇ ಕೃತಕ ಅಭಾವ ಸೃಷ್ಟಿಯಾಗದಂತೆ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು.
ಬರದಿಂದ ಜಾನುವಾರುಗಳಿಗೆ ಮೇವಿನ ಸಂಕಷ್ಟ ಎದುರಾಗಲಿದೆ. ತಕ್ಷಣ ತಾಲ್ಲೂಕು ಮಟ್ಟದಲ್ಲಿ ಮೇವು ಬ್ಯಾಂಕ್ಗಳನ್ನು ಸಕ್ರಿಯಗೊಳಿಸಿ. ರೈತರು ಅನಿವಾರ್ಯವಾಗಿ ತಮ್ಮ ಜಾನುವಾರುಗಳನ್ನು ಕಾಸಾಯಿಖಾನೆಗಳಿಗೆ ಮಾರಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳಿ.
ಭತ್ತ, ಜೋಳ ಹಾಗೂ ದ್ವಿದಳ ಧಾನ್ಯಗಳ ಇಳುವರಿ ಕುಂಠಿತಗೊಳ್ಳುವ ಭೀತಿಯಿದೆ. ಇದು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬನ್ನೇ ಮುರಿಯಲಿದೆ. ಸರ್ಕಾರ ಈಗಲೇ ಬೆಳೆ ವಿಮೆ ಹಾಗೂ ಬರ ಪರಿಹಾರದ ಕ್ರಿಯಾ ಯೋಜನೆಯನ್ನು ರೂಪಿಸಿ, ಅನ್ನದಾತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು.
ಅಂತರ್ಜಲ ಮಟ್ಟ ವೇಗವಾಗಿ ಕುಸಿಯುತ್ತಿದ್ದು, 12 ಜಿಲ್ಲೆಗಳಲ್ಲಿ ಉಷ್ಣ ಅಲೆಯ ಎಚ್ಚರಿಕೆ ನೀಡಲಾಗಿದೆ. ಜನಸಾಮಾನ್ಯರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಬರುವ ಮುನ್ನ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಿ.
ದೆಹಲಿಯಲ್ಲಿ ಕುರ್ಚಿ ಉಳಿಸಿಕೊಳ್ಳುವ ರಾಜಕೀಯ ಮೇಲಾಟಕ್ಕಿಂತ ರಾಜ್ಯದ ಜನರ ಹಿತ ಕಾಯುವುದು ಮುಖ್ಯಮಂತ್ರಿಗಳ ಪ್ರಥಮ ಆದ್ಯತೆಯಾಗಲಿ. ಸರ್ಕಾರ ಕೂಡಲೇ ‘ಬರ ನಿರ್ವಹಣಾ ಸಮಿತಿ’ಯನ್ನು ಸಕ್ರಿಯಗೊಳಿಸಿ, ಯುದ್ದದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಅಶೋಕ್ ಸಲಹೆಗಳನ್ನು ನೀಡಿ ಎಚ್ಚರಿಸಿದ್ದಾರೆ.
