ಮೈಸೂರು: ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಲಕ್ಷಣ ಘನಾಂತವನ್ನು ಅಧ್ಯಯನ ಮಾಡಿದ ವಿದ್ವಾಂಸರಾದ ಶ್ರೀ ಹರಿಸೀತಾರಾಮಮೂರ್ತಿ ಸಲಕ್ಷಣ ಘನಪಾಠಿ ಅವರಿಗೆ ಪಿಎಚ್ಡಿ ಪದವಿ ಪ್ರದಾನ ಮಾಡಲಾಗಿದೆ.
ಅವರು ವೇದದಲ್ಲಿ ಬರುವ ಪಂಚ ಕಾಠಕಗಳನ್ನು ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಈ ಗೌರವ ದೊರೆತಿದೆ.
ವೇದ ವಿಭಾಗದಲ್ಲಿ ಸಲ್ಲಿಸಲಾದ “ತೈತ್ತಿರೀಯಕಾಠಕಾನಾಂ ಸಾಂಗಕರ್ಮ ಸ್ವರೂಪನಿರೂಪಣೇ ಸಾಯಣಾದಿ ಭಾಷ್ಯಾನುಸಾರೇಣ ಸವಿಮರ್ಶೋ ವಿಚಾರಃ” ಎಂಬ ಸಂಶೋಧನಾ ಪ್ರಬಂಧವು ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.
ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿ “ಶ್ರೀ ದತ್ತಾವಧೂತ ಸಾಂಗ ವೇದ ಗುರುಕುಲಂ” ಎಂಬ ಗುರುಕುಲವನ್ನು ಸ್ಥಾಪಿಸಿ ವೇದಾಧ್ಯಯನದ ಅಭಿವೃದ್ಧಿಗೆ ಪರಿಶ್ರಮಿಸುತ್ತಿರುವ ಶ್ರೀ ಹರಿಸೀತಾರಾಮಮೂರ್ತಿ ಅವರಿಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಡಾ. ಮಂಜುನಾಥ ಭಟ್ಟರು ಮಾರ್ಗದರ್ಶಕರಾಗಿದ್ದರು.
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರ ಉಪಸ್ಥಿತಿಯಲ್ಲಿ ಏಪ್ರಿಲ್ ೭ರಂದು ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ದೀಕ್ಷಾಂತ ಘಟಿಕೋತ್ಸವದಲ್ಲಿ 2023–24 ಮತ್ತು 2024–25ನೇ ಸಾಲಿನ ಒಟ್ಟು 36 ಪಿಎಚ್ಡಿ ಅಭ್ಯರ್ಥಿಗಳು ಪದವಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ರಾಜ್ಯಪಾಲರು ಶ್ರೀ ಹರಿಸೀತಾರಾಮಮೂರ್ತಿ ಸಲಕ್ಷಣ ಘನಪಾಠಿ ಅವರಿಗೆ ಪಿಎಚ್ಡಿ ಪದವಿ ನೀಡಿ ಗೌರವಿಸಿದರು.
