ಮೈಸೂರು, ಏಪ್ರಿಲ್ 1: ಸಿದ್ಧಗಂಗಾ ಮಠದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ 119ನೇ ಜಯಂತೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಮೈಸೂರಿನ ಬಸವೇಶ್ವರ ರಸ್ತೆಯಲ್ಲಿ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಬಸವ ಬಳಗ ಹಾಗೂ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ ಭಕ್ತವೃಂದ ವತಿಯಿಂದ ಈ ಭವ್ಯ ಮೆರವಣಿಗೆ ಆಯೋಜಿಸಲಾಗಿತ್ತು.
ಬೆಳಿಗ್ಗೆ 9 ಗಂಟೆಗೆ ಬಸವೇಶ್ವರ ರಸ್ತೆಯ 13ನೇ ಕ್ರಾಸ್ನಿಂದ ಪ್ರಾರಂಭವಾದ ಶ್ರೀಗಳ ಭಾವಚಿತ್ರವುಳ್ಳ ಭವ್ಯ ಮೆರವಣಿಗೆಗೆ ಶಾಸಕರಾದ ಹರೀಶ್ ಗೌಡ ಜಿ.ಡಿ, ಶಿವಾರ್ಚಕರ ಸಂಘದ ರಾಜ್ಯಾಧ್ಯಕ್ಷರಾದ ಮಲ್ಲಣ್ಣ, ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್, ನಗರ ಪಾಲಿಕೆ ಮಾಜಿ ಸದಸ್ಯ ಪ್ರದೀಪ್ ಕುಮಾರ್, ಮಲ್ಲೇಶ್ , ಬಸವ ಬಳಗ ಒಕ್ಕೂಟಗಳ ಅಧ್ಯಕ್ಷರಾದ ಚಂದ್ರಶೇಖರ್, ಬ್ಯಾತಳ್ಳಿ ನಾಗರಾಜ್ , ವರುಣ ಮಹೇಶ್ ಅವರುಗಳು ಚಾಲನೆ ನೀಡಿದರು.
ಮೆರವಣಿಗೆಯುದ್ದಕ್ಕೂ ಜಾನಪದ ಕಲಾತಂಡಗಳ ಪ್ರದರ್ಶನ, ಮೇಳಗಳು ಮತ್ತು ಸಾವಿರಾರು ಭಕ್ತಾದಿಗಳ ಜಯಘೋಷಗಳು ಮೊಳಗಿದವು.
ಬಸವೇಶ್ವರ ರಸ್ತೆಯಿಂದ ಆರಂಭಗೊಂಡ ಮೆರವಣಿಗೆಯು ನೂರೊಂದು ಗಣಪತಿ ದೇವಸ್ಥಾನ, ರಾಮಾನುಜ ರಸ್ತೆ, ಕಂಸಾಳೆ ಮಾದೇವಯ್ಯ ವೃತ್ತ ಹಾಗೂ ಚಾಮುಂಡಿಪುರಂ ವೃತ್ತದ ಮೂಲಕ ಸಾಗಿ, ಸಾರ್ವಜನಿಕರ ಗಮನ ಸೆಳೆಯಿತು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಸಮಾಜದ ಮುಖಂಡರಾದ ಅಂಬಳೆ ಶಿವಣ್ಣ, ಸಂದೀಪ್ ಚಂದ್ರಶೇಖರ್, ಗೆಜ್ಜಗಳ್ಳಿ ಶಂಕರ್, ಮುಕುಂದ ರಾಜೇ ಅರಸ್, ಮಹಾದೇವ ಸ್ವಾಮಿ, ಹಡ್ಜನ ಗುರುಸ್ವಾಮಿ, ಪ್ರಭು, ಮಾರಶೆಟ್ಟಳ್ಳಿ ಮಹದೇವು, ಮಲ್ಲೇಶ್, ವೃಷಭೇಂದ್ರ, ಬಸವರಾಜು, ಜಯಣ್ಣ, ಹಡ್ಜನ ರಾಜು, ಶಿವಣ್ಣ, ಶಿವಕುಮಾರ ಶಾಸ್ತ್ರಿಗಳು, ಮುರುಡಗಳ್ಳಿ ಕುಮಾರ್, ಎಚ್.ಎನ್ ಚಂದ್ರಶೇಖರ್, ಬಾಲಕೃಷ್ಣ ಗುಂಡಪ್ಪ, ಭಾಸ್ಕರ್,ನವೀನ್ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದು, ಶ್ರೀಗಳ ತತ್ವ ಆದರ್ಶಗಳನ್ನು ಸ್ಮರಿಸಿದರು.
ತ್ರಿವಿಧ ದಾಸೋಹಿಗಳಾದ ಶ್ರೀಗಳ ಜಯಂತಿಯನ್ನು ಆಚರಿಸುವ ಮೂಲಕ ಅವರ ಕಾಯಕ ಯೋಗದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ.
ಈ ಭವ್ಯ ಮೆರವಣಿಗೆಗೆ ಸಹಕರಿಸಿದ ಎಲ್ಲಾ ಭಕ್ತ ವೃಂದದವರಿಗೂ, ಅಭಿಮಾನಿಗಳಿಗೆ ಸಂಘದ ವತಿಯಿಂದ ಧನ್ಯವಾದ ತಿಳಿಸಲಾಯಿತು.
