ಮೈಸೂರು: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಹಲವು ವರ್ಷಗಳ ಕಾಲ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಶ್ರೀ ರಾಜಕುಮಾರ್ ಅವರ ನಿವೃತ್ತಿ ಪ್ರಯುಕ್ತ ಭಾವಪೂರ್ಣ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉಪನಿರ್ದೇಶಕರಾದ ಎಂ ಪಿ ನಾಗಮ್ಮ ಅವರು ತಮ್ಮ ದೀರ್ಘ ಸೇವಾ ವಧಿಯಲ್ಲಿ ಕಚೇರಿಯ ಎಲ್ಲಾ ಜವಾಬ್ದಾರಿಗಳನ್ನು ಶ್ರದ್ಧೆಯಿಂದ ನಿರ್ವಹಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಸಹೋದ್ಯೋಗಿಗಳೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸಿಕೊಂಡು ಮಾದರಿಯಾದ ಸರ್ಕಾರಿ ನೌಕರರಾಗಿದ್ದರು ಎಂದು ಪ್ರಶಂಸಿಸಿದರು.
ಅವರ ಸೇವಾ ಮನೋಭಾವ, ಸಮಯಪಾಲನೆ, ಕಾರ್ಯನಿಷ್ಠೆ ಮತ್ತು ಸರಳ ವ್ಯಕ್ತಿತ್ವ ಎಲ್ಲರಿಗೂ ಪ್ರೇರಣೆಯಾಗಿದ್ದು, ಕಚೇರಿಯ ಅಭಿವೃದ್ಧಿಗೆ ರಾಜಕುಮರ್ ಅವರು ನೀಡಿದ ಕೊಡುಗೆ ಅಮೂಲ್ಯವಾಗಿದೆ ಎಂದು ಹೇಳಿದರು.
ಸರ್ಕಾರಿ ಸೇವೆಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಮತ್ತು ಕರ್ತವ್ಯಪ್ರಜ್ಞೆ ಅತಿ ಮುಖ್ಯವಾಗಿದ್ದು, ಈ ಮೌಲ್ಯಗಳನ್ನು ರಾಜಕುಮಾರ್ ಅವರು ತಮ್ಮ ಕಾರ್ಯಕ್ಷೇತ್ರದಲ್ಲಿ ಪ್ರತಿಪಾದಿಸಿದ್ದಾರೆ. ಅವರ ಸೇವೆಯನ್ನು ಎಲ್ಲರೂ ಸದಾ ಸ್ಮರಿಸಿಕೊಳ್ಳಬೇಕಿದೆ ಎಂದು ಬೋದಕೇತರ ಸಂಘದ ಅಧ್ಯಕ್ಷ ಕೃಪಾಕರ್ ತಿಳಿಸಿದರು.
ಸನ್ಮಾನಿತರಾದ ಶ್ರೀ ರಾಜಕುಮಾರ್ ಅವರು ಮಾತನಾಡಿ, ತಮ್ಮ ಸೇವಾ ಅವಧಿಯಲ್ಲಿ ದೊರೆತ ಅನುಭವಗಳು ಜೀವನದಲ್ಲಿ ಬಹಳ ಅಮೂಲ್ಯವಾಗಿವೆ. ಈ ಅವಧಿಯಲ್ಲಿ ತಮ್ಮೊಂದಿಗೆ ಸಹಕರಿಸಿದ ಎಲ್ಲಾ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಸಿಬ್ಬಂದಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಸಾರ್ವಜನಿಕ ಸೇವೆಯಲ್ಲಿ ಕೆಲಸ ಮಾಡುವ ಅವಕಾಶ ದೊರೆತದ್ದು ತಮ್ಮ ಭಾಗ್ಯ, ನಿವೃತ್ತಿ ನಂತರವೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂಬ ಇಚ್ಛೆ ವ್ಯಕ್ತಪಡಿಸಿದರು.
ಪ್ರಾಂಶುಪಾಲರ ಸಂಘದ ಅಧ್ಯಕ್ಷ ಹನುಮಂತರಾವ್,ಖಜಾಂಚಿ ರಾಮೇಗೌಡ ,ನಿವೃತ್ತ ಉಪನಿರ್ದೇಶಕರಾದ ಮರಿಸ್ವಾಮಿ ,ನಾಗಮಲ್ಲೇಶ್, ಸಿದ್ದರಾಜು, ಪ್ರಾಂಶುಪಾಲರಾದ ಲಯನ್ ಸಿ.ಆರ್. ದಿನೇಶ್ ,ವಿಜಯೇಂದ್ರ ಕುಮಾರ್ ,ಬಾಲಸುಬ್ರಮಣ್ಯ ,ರವೀಶ್ ,ಉಪನ್ಯಾಸಕರಾದ ಶಿವಕುಮಾರ್, ಅನುದಾನಿತ ಕಾಲೇಜುಗಳ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಬೋಧಕೇತರ ನೌಕರರ ಸಂಘದ ಕಾರ್ಯದರ್ಶಿ ಸಮೃದ್ಧ ಆರ್, ಖಜಾಂಚಿ ಚಂದ್ರಮ್ಮ, ಶ್ರೀ ಮುಕುಂದ ವಿ ಎನ್, ಉಪಸ್ಥಿತರಿದ್ದರು.
