ಜೆರುಸಲೇಂ: ಹಾರ್ಮುಜ್ ಜಲಸಂಧಿ ಮುಚ್ಚಲು ಕಾರಣರಾಗಿದ್ದ ಇರಾನ್ ನೌಕಾ ಪಡೆಯ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಮೃತಪಟ್ಟಿದ್ದಾರೆ.
ಅಲಿರೆಜಾ ತಂಗ್ಸಿರಿ ಹಾರ್ಮುಜ್ ಜಲಸಂಧಿ ಬಳಿ ಇಸ್ರೇಲ್ ದಾಳಿಯಿಂದ ಸಾವನ್ನಪ್ಪಿದ್ದಾರೆ.ಅವರ ಸಾವು ಇಲ್ಲಿನ ಉದ್ವಿಗ್ನತೆಯನ್ನು ಇನ್ನಷ್ಟು ಉಲ್ಬಣಗೊಳಿಸಿದಂತಾಗಿದೆ.
ತಂಗ್ಸಿರಿ ಹಾರ್ಮುಜ್ ಜಲಸಂಧಿಯ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇರಾನ್ ಪ್ರತೀಕಾರದ ಭೀತಿಯು ಗಲ್ಫ್ ರಾಷ್ಟ್ರಗಳು ಮತ್ತು ಜಾಗತಿಕ ಜಲಮಾರ್ಗಗಳಲ್ಲಿ ಭದ್ರತಾ ಬಿಕ್ಕಟ್ಟನ್ನು ಆಳಗೊಳಿಸುವ ಸಾಧ್ಯತೆ ಇದೆ. ವಿಶ್ವದಲ್ಲಿ ತೈಲ ಬಿಕ್ಕಟ್ಟಿನ ಆತಂಕವೂ ಎದುರಾಗಿದೆ.
ತಂಗ್ಸಿರಿ ಇರಾನ್ ನೌಕಾಪಡೆಯ ಪ್ರಮುಖ ಕಮಾಂಡರ್ ಆಗಿದ್ದರು ಮತ್ತು ಹಾರ್ಮುಜ್ನಂತಹ ಕಾರ್ಯತಂತ್ರದ ಪ್ರದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇರಾನ್ ತನ್ನ ಉನ್ನತ ಮಿಟಿಲರಿ ಅಧಿಕಾರಿಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಸಾದ್ಯತೆ ಇದೆ.
ಅಮೆರಿಕ-ಇಸ್ರೇಲ್ ಇರಾನ್ನ ಮೂರು ಡಜನ್ಗಿಂತಲೂ ಹೆಚ್ಚು ಪ್ರಮುಖ ಮಿಲಿಟರಿ ಕಮಾಂಡರ್ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.
ಇರಾನ್ನ ಪ್ರಬಲ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ನೌಕಾ ವಿಭಾಗದ ನೇತೃತ್ವ ವಹಿಸಿದ್ದ ತಂಗ್ಸಿರಿ, ಬಂದರು ನಗರಿ ಬಂದರ್ ಅಬ್ಬಾಸ್ನಲ್ಲಿ ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಇಸ್ರೇಲ್ ರಕ್ಷಣಾ ಪಡೆಗಳು ದಾಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ,ಇರಾನ್ ನಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇರಾನ್ ಇಸ್ರೇಲ್ನ ಟೆಲ್ ಅವೀವ್ ಸೇರಿದಂತೆ ವಸತಿ ಪ್ರದೇಶಗಳ ಮೇಲೆ ಎರಡು ಗಂಟೆಗಳಲ್ಲಿ ನಾಲ್ಕು ಕ್ಷಿಪಣಿಗಳನ್ನು ಹಾರಿಸಿದೆ.ಇದರಿಂದ ಕೆಲವರು ಗಾಯಗೊಂಡಿದ್ದಾರೆ.
