ಬೆಂಗಳೂರು: ಆಮ್ ಆದ್ಮಿ ಪಕ್ಷದ ಮಹಿಳಾ ನಾಯಕಿ ಸತ್ಯವಾಣಿ ಎಚ್ಎಎಲ್ ಪೊಲೀಸರ ವಿರುದ್ಧ ಮಂಗಳವಾರ ರಾಜ್ಯ ಮಹಿಳಾ ಆಯೋಗದಲ್ಲಿ ದೂರನ್ನು ಸಲ್ಲಿಸಿದ್ದಾರೆ.
ಎಚ್ಎಎಲ್ ವಾರ್ಡಿನಲ್ಲಿ ಮುಂಬರುವ ಜಿಬಿಎ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವ ಸತ್ಯವಾಣಿ ವಿರುದ್ಧ ಅವರ ಮನೆಯ ಮುಂದೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾನಹಾನಿ,
ಅವಹೇಳನಕಾರಿ ಆಗುವಂತಹ 50 ಕ್ಕೂ ಹೆಚ್ಚು ಬ್ಯಾನರ್ ಗಳನ್ನು ಮುದ್ರಿಸಿ, ರಾತ್ರೋರಾತ್ರಿ ಕಟ್ಟಿರುವ ಪ್ರಕರಣದ ಕುರಿತಂತೆ ಸ್ಥಳೀಯ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದರೂ ಕೂಡಾ
ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ತೋಡಿಕೊಂಡರು.
ಪೊಲೀಸರ ಬೇಜವಾಬ್ದಾರಿ,ಅನುಚಿತ ವರ್ತನೆಗಳು ಹಾಗೂ ಅಪರಾಧಿಗಳೊಂದಿಗೆ ಕೈಜೋಡಿಸಿ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ಮಾಡಲಾಗುತ್ತಿದೆ ಎಂದು ಮಹಿಳಾ ಆಯೋಗದ ಮುಂದೆ ದೂರನ್ನು ಸಲ್ಲಿಸಿ ಕೂಡಲೇ ನ್ಯಾಯ ಕೊಡಿಸಬೇಕೆಂದು ಸತ್ಯವಾಣಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಸತ್ಯವಾಣಿ ಮಾತನಾಡಿ, ಕ್ಷೇತ್ರದಲ್ಲಿರುವ ವಿಭೂತಿಪುರ ಕೆರೆಗೆ ಸಂಬಂಧಿಸಿದಂತೆ ಅನೇಕ ವರ್ಷಗಳಿಂದ ಹೋರಾಟಗಳನ್ನು ಮಾಡಿ ಕೊಂಡು ಬರುತ್ತಿದ್ದೇನೆ ಎಂದು ತಿಳಿಸಿದರು.
ನಾನು ಕೆರೆ ಒತ್ತುವರಿದಾರರ ವಿರುದ್ಧ ಲೋಕಾಯುಕ್ತದಲ್ಲಿ ದೂರು ಕೂಡಾ ದಾಖಲಿಸಿದ್ದೇನೆ, ಲೋಕಾಯುಕ್ತದಲ್ಲಿ ವಿಚಾರಣೆ ಸಹ ನಡೆಯುತ್ತಿದೆ. ಅನೇಕ ವರ್ಷಗಳಿಂದ ಕ್ಷೇತ್ರದ ರಾಜ ಕಾಲುವೆಗಳು ಹಾಗೂ ಕೆರೆಗಳ ಅಕ್ರಮ ಒತ್ತುವರಿದಾರರ ವಿರುದ್ಧ ಸತತವಾಗಿ ಹೋರಾಟ ನಡೆಸಿಕೊಂಡು ಬಂದಿರುವುದನ್ನು ಸಹಿಸದೆ ಈ ರೀತಿ ರಾಜಕೀಯ ಕುತಂತ್ರಗಳಿಗೆ ಕೈ ಹಾಕಿದ್ದಾರೆ.ಇದು ಯಾವ ನಾಗರಿಕ ಸಮಾಜವು ಒಪ್ಪುವಂಥದ್ದಲ್ಲ ಎಂದು ಹೇಳಿದರು.
ಬಿ. ಪ್ಯಾಕ್ ಸಂಸ್ಥೆಯಲ್ಲಿ ನಾಗರೀಕ ಮುಖಂಡಳಾಗಿದ್ದೇನೆ ಹಾಗೂ ಬಿ. ಸೇಫ್ ಸಂಸ್ಥೆಯಲ್ಲಿ ಮಹಿಳಾ ರಾಯಭಾರಿಯಾಗಿ ಸತತವಾಗಿ ಮಹಿಳೆಯರ ಪರವಾದ ಅನೇಕ ಸಾಮಾಜಿಕ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇನೆ ನನ್ನಂತಹ ಮಹಿಳೆಯರಿಗೆ ಇಂತಹ ದುಷ್ಕೃತ್ಯಗಳಿಂದ ರಕ್ಷಣೆ ಇಲ್ಲದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನನ್ನಂತಹ ಮಹಿಳೆಯರು ಮುಂಬರುವ ಪಾಲಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತಹ ಕೆಟ್ಟ ವಾತಾವರಣ ಬೆಂಗಳೂರಿನಲ್ಲಿದೆ. ನನ್ನ ಪಾಡೇ ಹೀಗಾದರೆ ಇನ್ನು ಸಾಮಾನ್ಯ ಮಹಿಳೆಯರ ಗೋಳನ್ನು ಕೇಳುವವರೇ ಇಲ್ಲ. ನನಗೆ ನ್ಯಾಯ ದೊರಕುವ ತನಕ ಹೋರಾಟ ನಡೆಸುತ್ತೇನೆ ಎಂದು ಸತ್ಯವಾಣಿ ತಿಳಿಸಿದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮಹಿಳಾ ಮುಖಂಡರಾದ ವೀಣಾ ಸರಾವ್, ಪುಷ್ಪ ಜಿ ಕೇಶವ್ ಮತ್ತಿತರರು ಹಾಜರಿದ್ದರು.
