ಕೊಲಂಬಿಯಾ: ದಕ್ಷಿಣ ಕೊಲಂಬಿಯಾದಲ್ಲಿ ಸೇನಾ ವಿಮಾನವು ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದು 66 ಮಂದಿ ಸೈನಿಕರು ಮೃತಪಟ್ಟಿದ್ದಾರೆ.
ಈ ಅವಘಡದಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದುರಂತ ಅಮೆಜಾನ್ ಪ್ರದೇಶದಲ್ಲಿರುವ ಪುಟುಮಾಯೋ ಪ್ರಾಂತ್ಯದ ದೂರದ ಪಟ್ಟಣ ಪ್ಯೂರ್ಟೋ ಲೆಗುಇಜಾಮೋದಲ್ಲಿ ಸಂಭವಿಸಿದೆ.ಈ ಪ್ರದೇಶವು ಪೆರು ಮತ್ತು ಇಕ್ವಡಾರ್ ದೇಶಗಳ ಗಡಿಗೆ ಹೊಂದಿಕೊಂಡಿದೆ.
ಪುಟುಮಾಯೋ ರಾಜ್ಯಪಾಲ ಜೋನ್ ಗ್ಯಾಬ್ರಿಯೆಲ್ ಮೊಲಿನಾ ಅವರು 66 ಮಂದಿ ಮೃತಪಟ್ಟಿದ್ದು ಇನ್ನೂ 21 ಮಂದಿಯನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಲಾಕ್ಹೀಡ್ ಮಾರ್ಟಿನ್ ನಿರ್ಮಿತ ಹೆರ್ಕ್ಯುಲಿಸ್ ಸಿ-130 ವಿಮಾನವು ಪುಟುಮಾಯೋ ಪ್ರಾಂತ್ಯದ ಮತ್ತೊಂದು ನಗರಕ್ಕೆ ಸೈನಿಕರನ್ನು ಸಾಗಿಸುತ್ತಿತ್ತು ಎಂದು ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನವು ಟೇಕ್ಆಫ್ ಆದ ಸ್ಥಳದಿಂದ ಕೇವಲ 1.5 ಕಿಮೀ ದೂರದಲ್ಲೇ ನೆಲಕ್ಕೆ ಅಪ್ಪಳಿಸಿದೆ, ವಿಮಾನದಲ್ಲಿದ್ದ ಸ್ಫೋಟಕ ವಸ್ತುಗಳು ಬೆಂಕಿಯಿಂದ ಸ್ಫೋಟಗೊಂಡಿವೆ.
ಗಾಯಾಳುಗಳನ್ನು ಎರಡು ವಿಮಾನಗಳ ಮೂಲಕ ರಾಜಧಾನಿ ಬೋಗೋಟಾ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ಕೊಲಂಬಿಯಾ ವಾಯುಪಡೆಯ ಕಮಾಂಡರ್ ಕಾರ್ಲೋಸ್ ಫೆರ್ನಾಂಡೋ ಸಿಲ್ವಾ ತಿಳಿಸಿದ್ದಾರೆ.
