ಮೈಸೂರು: ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಬರುತ್ತಿರುವ ಹಿನ್ನೆಲೆಯಲ್ಲಿ ಏ.೧೦ ರಿಂದ ಮೇ ೩೦ರವರೆಗೆ ೫೦ ದಿನಗಳ ಕಾಲ ನಗರದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಬೇಸಿಗೆ ಮೇಳ ಆಯೋಜಿಸಲಾಗುತ್ತದೆ.
ವಸ್ತು ಪ್ರರ್ದಶನ ಎಂಬುದು ನಾಡಹಬ್ಬ ದಸರಾಗೆ ಸೀಮಿತವಾಗದೆ ವರ್ಷದಲ್ಲಿ ನಾಲ್ಕೈದು ಬಾರಿಯಾದರೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಜನರನ್ನು ಆಕರ್ಷಿಸಬೇಕು ಎಂಬುದು ಪ್ರಾಧಿಕಾರದ ಅಧ್ಯಕ್ಷ ಅಯೂಬ್ಖಾನ್ ಆಲೋಚನೆಯಾಗಿದೆ.
ವಸ್ತು ಪ್ರದರ್ಶನ ಆವರಣದಲ್ಲಿ ಕೈಗಾರಿಕಾ ಮೇಳ ಆಯೋಜನೆ, ವಿವಿಧ ಸಮ್ಮೇಳನಗಳನ್ನು ನಡೆಸಲು ಅನುವು ಮಾಡಿಕೊಡುವುದು, ವಿವಾಹ ಸಮಾರಂಭಗಳಿಗೆ ಸ್ಥಳಾವಕಾಶ ಒದಗಿಸುವ ಮೂಲಕ ವರ್ಷಪೂರ್ತಿ ವಸ್ತು ಪ್ರದರ್ಶನ ಆವರಣ ಚಟುವಟಿಕೆಯಿಂದ ಕೂಡಿರುವಂತೆ ಮಾಡಲು ಯೋಜನೆ ರೂಪಿಸಲಾಗಿದೆ.
ವಸ್ತುಪ್ರದರ್ಶನ ಆವರಣದಲ್ಲಿ ಕಳೆದ ೧೦ ವರ್ಷಗಳಿಂದಲೂ ಬೇಸಿಗೆ ಮೇಳೆ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಮೇಳದ ರೂಪುರೇಷೆ ಬದಲಾಗುತ್ತಿದೆ. ಅದರಂತೆ ಈ ಬಾರಿ ಕೂಡ ಮೇಳದಲ್ಲಿ ಹಲವು ವಿಶೇಷತೆಗಳಿವೆ.
೬೦ ಮಳಿಗೆಗಳು: ವಸ್ತುಪ್ರರ್ದಶನ ಆವರಣದಲ್ಲಿ ಬೇಸಿಗೆ ಮೇಳದ ವೇಳೆ ಸ್ಥಳೀಯ ಹಾಗೂ ರಾಜ್ಯದ ವಿವಿಧೆಡೆಗಳಿಂದ ಬರುವ ಸುಮಾರು ೬೦ ಮಂದಿ ಮಳಿಗೆಗಳನ್ನು ತೆರೆದು ವ್ಯಾಪಾರ ನಡೆಸಲು ಅವಕಾಶ ಮಾಡಲಾಗುತ್ತದೆ.
ಮಹಿಳೆಯರ ಅಲಂಕಾರಿಕ ವಸ್ತುಗಳು, ಮಹಿಳೆಯರ ಹಾಗೂ ಪುರುಷರ ಬಟ್ಟೆಗಳು, ಗೃಹ ಬಳಕೆಯ ವಸ್ತುಗಳು, ಕೆತ್ತನೆಗಳು, ಮಕ್ಕಳ ಅಟಿಕೆಗಳು, ಸಿದ್ಧಪಡಿಸಿದ ಆಹಾರ ಪ್ಯಾಕೆಟ್ ಗಳು ಹೀಗೆ ಹಲವು ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ.
ಮನೋರಂಜನೆ: ಇನ್ನು ವಸ್ತುಪ್ರದರ್ಶನದ ಮುಖ್ಯದ್ವಾರದ ಸಮೀಪವೇ ಅಮ್ಯೂಸ್ಮೆಂಟ್ ಪಾರ್ಕ್ ಆರಂಭಿಸಲು ಉದ್ದೇಶಿಸಲಾಗಿದೆ.
ವಸ್ತುಗಳ ಪ್ರದರ್ಶನ ಹಾಗೂ ಆಟೋಟಗಳು ಒಂದೆಡೆ ಇದ್ದು, ಜನರನ್ನು ಆಕರ್ಷಿಸಲು ಸಿದ್ಧವಾಗುತ್ತಿದೆ.
ಡ್ರ್ಯಾಗನ್ ಪಾಂಡ್: ವಸ್ತು ಪ್ರದರ್ಶನಕ್ಕೆ ಬರುವವರನ್ನು ಬಹು ಮುಖ್ಯವಾಗಿ ಆಕರ್ಷಿಸುವುದು ಡ್ರ್ಯಾಗನ್ ಪಾಂಡ್. ಅಲ್ಲಿನ ಆವರಣದಲ್ಲಿ ನಡೆಯುವ ಲೇಸರ್ ಷೋ ಜನಾಕರ್ಷಣೀಯ.
ತಿಂಡಿ, ತಿನಿಸುಗಳು: ವಸ್ತುಪ್ರದರ್ಶನ ಆವರಣಕ್ಕೆ ಬರುವ ಮಕ್ಕಳು ಹಾಗೂ ಇತರರಿಗೆ ಅಲ್ಲಿ ಐಸ್ಕ್ರೀಂ, ಡೆಲ್ಲಿ ಹಪ್ಪಳ, ಚುರುಮುರಿ, ಮಲ್ಲಿಗೆ ಇಡ್ಲಿ, ಮೆಣಸಿನಕಾಯಿ ಬಜ್ಜಿ, ಗೋಬಿ ಮಂಚೂರಿ, ಮಸಾಲೆ ದೋಸೆ ಹೀಗೆ ವಿವಿಧ ತಿಂಡಿ ತಿನಿಸುಗಳು ಪ್ರವಾಸಿಗರ ನಾಲಿಗೆಯಲ್ಲಿ ನೀರೂರಿಸಲಿದೆ.
