ಮೈಸೂರು: ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಮಾ.25ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಮುಖಂಡ ನಾಗವಾಲ ನರೇಂದ್ರ ಮನವಿ ಮಾಡಿದರು.
ಅಂದು ಮೈಸೂರು ಭಾಗದಿಂದ ಸ್ವಯಂ ಪ್ರೇರಿತರಾಗಿ ಸಾವಿರಾರು ಮಂದಿ ಭಾಗವಹಿಸಬೇಕು ಎಂದು ಅವರು ಕೋರಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಏರ್ಪಡಿಸಲಾಗಿದ್ದ ಮಾ.23 ಮೈಸೂರಿನಲ್ಲಿ ಮಾ.25 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನ್ಯಾಯಮೂರ್ತಿಎಚ್.ಎನ್.ನಾಗಮೋಹನ್ ದಾಸ್ ಆಯೋಗದ ಅವೈಜ್ಞಾನಿಕ ವರದಿಯನ್ನು ನಾವೆಲ್ಲರೂ ತಿರಸ್ಕರಿಸಬೇಕು. ಇಷ್ಟು ದಿವಸ ಹೊಲಯ ಹಾಗೂ ಮಾದಿಗರು ಸಹೋದರರೆಂದು ಭಾವಿಸಿದ್ದೆವು ಎಂದು ಹೇಳಿದರು.
ಒಳ ಮೀಸಲಾತಿ ಹಂಚಿಕೆ ಮುನ್ನೆಲೆಗೆ ಬಂದ ಮೇಲೆ ಅದು ಸುಳ್ಳೆಂಬುದು ಸಾಬೀತಾಗಿದೆ. ಸಮೀಕ್ಷೆ ಯಲ್ಲಿ ಹೊಲೆಯ ಜನಾಂಗದವರು ಸರಿಯಾಗಿ ಪಾಲ್ಗೊಳ್ಳದೇ ವ್ಯತ್ಯಾಸವಾಗಿದೆ. ಪ್ರಾದೇಶಿಕವಾರು ಭಿನ್ನಭಿನ್ನವಾಗಿ ಜಾತಿಯನ್ನು ನಮೂದಿಸಿ ತೊಂದರೆಗೆ ಸಿಲುಕುವಂತಾಗಿದೆ ಎಂದು ಬೇಸರ ಪಟ್ಟರು.
ನಮ್ಮ ಮಕ್ಕಳ ಭವಿಷ್ಯಕ್ಕೆ ಕಂಟಕವಾಗಿರುವ ಒಳ ಮೀಸಲಾತಿಯನ್ನು ತಿರಸ್ಕರಿಸಬೇಕೆಂಬುದು ನಮ್ಮ ಆಗ್ರಹವಾಗಿದೆ.
ನಾವು ಕೂಡ ಸ್ವಾಭಿಮಾನಿಗಳು,ನಮ್ಮ ನಾಯಕರುಗಳಿಗೆ ಚಪ್ಪಾಲಿಯಲ್ಲಿ ಹೊಡೆಯುವವರ ಪರವಾಗಿ ನಿಲ್ಲಬೇಕಾದ ಅಗತ್ಯ ನಮಗಿಲ್ಲ ಎಂದು ನಾಗವಾಲ ನರೇಂದ್ರ ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ಬೋಗಾದಿ ನಾಗರಾಜ್ ಮಾತನಾಡಿ, ಮಾದಿಗ ಸಮುದಾಯದವರು ನಮ್ಮನ್ನು ಯುದ್ಧಕ್ಕೆ ಕರೆಯುತ್ತಿದ್ದಾರೆ, ರಕ್ತಪಾತವಾಗುತ್ತದೆ ಎಂದು ಭಾಷಣ ಮಾಡುತ್ತಾರೆ. ನಮ್ಮಿಂದಲೇ ಬಾಷಣ ಮಾಡುವುದನ್ನು ಕಲಿತವರಿಗೆ ಹೇಗೆ ಉತ್ತರ ಕೊಡಬೇಕು ಎಂಬುದು ನಮಗೆ ಗೊತ್ತಿದೆ ಎಂದು ಹೇಳಿದರು.
ಒಳ ಮೀಸಲಾತಿ ರಾಜಕಾರಣದ ಕುತಂತ್ರ. ಅದನ್ನು ವಿರೋಧಿಸಬೇಕು. ಪ್ರತಿಭಟನೆಯಲ್ಲಿ ಕನಿಷ್ಠ 6 ಲಕ್ಷ ಜನರು ಸೇರಬೇಕು ಎಂದು ಕರೆ ನೀಡಿದರು.
ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನಾ ರ್ಯಾಲಿ ಯಶಸ್ವಿಯಾಗಬೇಕಾದಲ್ಲಿ ಜಿಲ್ಲಾ ಹಾಗೂ ತಾಲ್ಲೂಕುಮಟ್ಟದಲ್ಲಿ ಸಮಿತಿಗಳಾಗಬೇಕು. ಪ್ರತೀ ಗ್ರಾಮದಲ್ಲಿಯೂ ಪಂಚಾಯ್ತಿ ಸೇರಿಸಿ ಸಮಾವೇಶದ ಮಹತ್ವದ ಬಗ್ಗೆ ತಿಳಿಸಬೇಕು ಎಂದು ಮುಖಂಡರು ಸಲಹೆ ನೀಡಿದರು.
ಸಂವಿದಾನ ನೀಡಿರುವ ಹಕ್ಕನ್ನು ಬಳಸಿಕೊಂಡು ಉನ್ನತ ಸ್ಥಾನದಲ್ಲಿ ಇದ್ದ ಹಾಗೂ ಇರುವ ನಮ್ಮ ಸಮುದಾಯದ ಸಾಕಷ್ಟು ಸ್ಥಿತಿವಂತರಿದ್ದಾರೆ. ಅವರುಗಳು ಮೌನವಾಗಿರಬಾರದು. ಸಮಾವೇಶ ಯಶಸ್ಸಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರತೀ ತಾಲ್ಲೂಕು ಮಟ್ಟದಿಂದ ಅಂದು ಬಸ್ಗಳ ವ್ಯವಸ್ಥೆ ಮಾಡಬೇಕು, ಭಾಗವಹಿಸುವವರಿಗೆ ಊಟ, ತಿಂಡಿ ವ್ಯವಸ್ಥೆ ಮಾಡಬೇಕು. ಇದಕ್ಕೆ ನಮ್ಮ ಮುಖಂಡರು ಹಾಗೂ ಸ್ವಾಭಿಮಾನಿ ದಲಿತರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ನಂಜುಂಡಸ್ವಾಮಿ, ಅತಿಥಿ ಉಪನ್ಯಾಸಕ ಡಾ. ಪ್ರತಾಪ್, ಬಿಳಿಗೆರೆ ರಾಜಣ್ಣ, ರಮೇಶ್, ಮೂರ್ತಿ, ಭುಗತಹಳ್ಳಿ ಮಣಿಯಯ್ಯ, ಜಿಪಂ ಮಾಜಿ ಸದಸ್ಯ ಚನ್ನಪ್ಪ, ಸೋಮಶೇಖರ್, ಜವರಪ್ಪ, ದಸಂಸ ಸಂಚಾಲಕ ಚೋರನಹಳ್ಳಿ ಶಿವಣ್ಣ, ಬೆಳವಾಡಿ ಶಿವಕುಮಾರ್, ಡಾ.ಎಸ್.ಮೂರ್ತಿ ಕಲ್ಲಹಳ್ಳಿ, ಕಲ್ಲಹಳ್ಳಿ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
