ಮೈಸೂರು: ಕೇಂದ್ರ ಸರ್ಕಾರದ ಅಸಹಕಾರದ ನಡೆವೆಯೂ, ಸಿದ್ದರಾಮಯ್ಯ ಸರ್ಕಾರ ಕನ್ನಡಿಗರ ಹಿತ ಕಾಯುವ ಬಜೆಟ್ ಮಂಡಿಸಿದ್ದು, ಬದ್ಧತೆ ಪ್ರದರ್ಶಿಸಿದ್ದಾರೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಅವರು,
17ನೇ ದಾಖಲೆ ಬಜೆಟ್ನಲ್ಲಿ ಸಿದ್ದು,ಉತ್ತರ ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಗೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
4.48 ಲಕ್ಷ ಕೋಟಿ ಗಾತ್ರದ ಬಜೆಟ್ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಗಾತ್ರದ ಬಜೆಟ್. 180 ಕೋಟಿ ವೆಚ್ಚದಲ್ಲಿ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯನ್ನು 600 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಿದ್ದಾರೆ.
ಬಂಬೂಬಜಾರ್ನಲ್ಲಿ ಪಿಪಿಪಿ ಮಾದರಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದಾರೆ. ತಾಂಡವಪುರದಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆ, ಹೆಚ್ಚಿನ ಪ್ರವಾಸಿಗರು ಹಾಗೂ ಪರಿಸರ ಪ್ರೇಮಿಗಳನ್ನು ಆಕರ್ಷಿಸುವ ದೃಷ್ಟಿಯಿಂದ ಮೈಸೂರಿನ ಲಿಂಗಾಂಬುಧಿ ಸಸ್ಯತೋಟದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧದಂತ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು ಕನಸು ನನಸಾಗಿಸಿದ್ದಾರೆ ಎಂದು ಸುಬ್ರಹ್ಮಣ್ಯ ಶ್ಲಾಘಿಸಿದ್ದಾರೆ.
ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಒಟ್ಟಾರೆ 69,488 ಕೋಟಿ ರೂ. ಮೊತ್ತದ ಕಾಮಗಾರಿಗಳು ಅನುಮೋದನೆಯಾಗಿದೆ, ಇದರಲ್ಲಿ ಕೇಂದ್ರ ಸರ್ಕಾರದ ಪಾಲು 30,888 ಕೋಟಿಗಳಾಗಿದ್ದು, ರಾಜ್ಯ ಸರ್ಕಾರದ ಪಾಲು 38,600 ಕೋಟಿಗಳಾಗಿರುತ್ತದೆ. ಕೇಂದ್ರ ಸರ್ಕಾರದಿಂದ ಇದುವರೆಗೆ ಕೇವಲ 11,786 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದ್ದು, ಇನ್ನೂ 19,102 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕಾಗಿದೆ ಎಂದು ವಿವರಿಸಿದ್ದಾರೆ.
ಯುಕೆಪಿ ಯೋಜನೆಯಡಿ ಆಲಮಟ್ಟಿ ಅಣೆಕಟ್ಟೆ ಎತ್ತರಿಸುವ ಕಾಮಗಾರಿಯಿಂದ ಮುಳುಗಡೆಯಾಗುವ ಭೂಸ್ವಾಧೀನಕ್ಕೆ ರೈತರು ಮತ್ತು ಸಂತ್ರಸ್ತರ ದೀರ್ಘಕಾಲದ ಬೇಡಿಕೆಗೆ ಮುಖ್ಯಮಂತ್ರಿಗಳು ಸೂಕ್ತವಾಗಿ ಸ್ಪಂದಿಸಿದ್ದಾರೆ.
ಒಣಭೂಮಿ ಜಮೀನು ಪ್ರತಿ ಎಕರೆಗೆ 30 ಲಕ್ಷ, ನೀರಾವರಿ ಜಮೀನು 40 ಲಕ್ಷ ಪರಿಹಾರ ನಿಗದಿ ಮಾಡಿದ್ದಾರೆ. ಇದರೊಂದಿಗೆ ರಾಜ್ಯದ ಅಭಿವೃದ್ಧಿ ವೇಗವನ್ನೂ ಹೆಚ್ಚಿಸಿದ್ದಾರೆ. ವಿಜಯಪುರ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು ಕನಸು ನನಸಾಗಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರ ಅಭಿವೃದ್ಧಿ ಬಜೆಟ್ ಟೀಕಿಸುವ ಬಿಜೆಪಿ ನಾಯಕರು ಮೋದಿ ಅವರು ಏನು ಕೊಟ್ಟಿದ್ದಾರೆ ಅನ್ನೋದನ್ನ ಪ್ರಶ್ನೆ ಮಾಡಲಿ ಎಂದು ಸುಬ್ರಹ್ಮಣ್ಯ ಟಾಂಗ್ ನೀಡಿದ್ದಾರೆ.
ಇರಾನ್ ಮೇಲಿನ ಯುದ್ಧದಿಂದ ತೈಲ ಕೊರತೆ ಎದುರಾಗುವ ಸಾಧ್ಯತೆ ಇದೆ. ಲಕ್ಷಗಟ್ಟಲೆ ಟನ್ ಬಾಸ್ಮತಿ ಅಕ್ಕಿ ಬಂದರಿನಲ್ಲೇ ಲಾಕ್ ಆಗಿದೆ, ಇದು ರಫ್ತುದಾರರಿಗೆ ಸಂಕಷ್ಟ ತಂದೊಡ್ಡಿದೆ. ಮೂಗಿಗೆ ತುಪ್ಪ ಸವರುವ ಕೆಲಸ ಮಾಡುವ ಕೇಂದ್ರದ ನಾಯಕರಿಗೆ ಸಿದ್ದರಾಮಯ್ಯ ಬಜೆಟ್ ಮಾದರಿಯಾಗಲಿ ಎಂದು ಕುಟುಕಿದ್ದಾರೆ.
