ಹನೂರು: ಕಾಡಾನೆಯೊಂದು ಬೆಳೆ ಹಾನಿ ಮಾಡುವುದರ ಜೊತೆಗೆ ಮನುಷ್ಯರ ಜೀವದ ಜೊತೆ ಚೆಲ್ಲಾಟವಾಡುತ್ತಿವೆ,ಅದನ್ನು ಸೆರೆಹಿಡಿದು ಬೇರೆ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರು ಬೈಲೂರು ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಹುಣಸೆ ಪಾಳ್ಯ, ಮುನಿ ಗುಡಿದೊಡ್ಡಿ, ಕಾನುಮೇಳ ದೊಡ್ಡಿ,
ಕರಿಯಪ್ಪನದೊಡ್ಡಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಗ್ರಾಮಸ್ಥರು ಕಾಡಾನೆಯೊಂದು ನಮ್ಮ ರೈತರ ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡುವುದರ ಜೊತೆಗೆ ಕಳೆದ ಎರಡು ದಿನಗಳ ಹಿಂದೆ ರೈಲ್ವೆ ಬ್ಯಾರಿಕೆಡ್ ಸಹ ಮುರಿದು ಹಾಕಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಡರಾತ್ರಿ ಮುನಿಗುಡಿ ದೊಡ್ಡಿ ಗ್ರಾಮದಲ್ಲಿ ಪ್ರಭುಸ್ವಾಮಿ ಎಂಬ ರೈತನ ಮೇಲೆ ದಾಳಿ ನಡೆಸಿದ್ದು,ಆತ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹಾಗಾಗಿ ರೈತರಿಗೆ ಸಂಕಷ್ಟವನ್ನು ತಂದಿರುವ ಕಾಡಾನೆ ಯನ್ನು ಹಿಡಿದು ಬೇರೆಡೆ ಸ್ಥಳಾಂತರ ಮಾಡುವಂತೆ ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಬೇರೆ ರೀತಿ ಪರಿಣಾಮಗಳು ಉಂಟಾದಲ್ಲಿ ಅದರ ಹೊಣೆಯನ್ನು ಅರಣ್ಯ ಇಲಾಖೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೈಲೂರು ವಲಯ ಅರಣ್ಯ ಅಧಿಕಾರಿ ಪ್ರಮೋದ್ ಮಾತನಾಡಿ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಪರಿಶೀಲನೆಗೆ ಆಗಮಿಸಲಿದ್ದು, ಈ ವಿಷಯವನ್ನು ಅವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಸದಾನಂದ ಸ್ವಾಮಿ, ರವಿ, ಚಿಕ್ಕಮಾದ, ಸತೀಶ್, ಸೇರಿದಂತೆ ಸಾಕಷ್ಟು ರೈತರು ಭಾಗವಹಿಸಿದ್ದರು.
