ಮೈಸೂರು: ಅದೊಂದು ಅಪೂರ್ವ ಕ್ಷಣ..!ಪುಟ್ಟ ಕಂದನನ್ನು ಕಣ್ ತುಂಬಿಕೊಂಡ ದಂಪತಿ ತಾವೇ ಧನ್ಯರೆಂದು ಖುಷಿ ಪಟ್ಟ ಕ್ಷಣ.
ಹೌದು ಇದು ನಿಜ,ಮಗುವನ್ನು ದತ್ತು ಪಡೆದುಕೊಂಡ ದಂಪತಿ ಕೈಗಳಿಗೆ ಮಗು ಬರುತ್ತಿದ್ದಂತೆ ಎಲ್ಲಿಲ್ಲದ ಸಂಭ್ರಮಪಟ್ಟರು.ಅದನ್ನು ನೋಡಿದವರ ಹೃದಯ ಕೂಡಾ ದ್ರವಿಸಿ ಹೋಯಿತು.
ಮಗು ಪಡೆದ ಖುಷಿಯಲ್ಲಿ ಎಲ್ಲರಿಗೂ ಧನ್ಯವಾದ ಹೇಳಿ ಕಂದನೊಂದಿಗೆ ಸ್ಪೇನ್ ದೇಶಕ್ಕೆ ದಂಪತಿ ತೆರಳಿದರು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಭಾರತೀಯ ಮಗುವನ್ನು ದತ್ತು ಪಡೆದ ಸ್ಪೇನ್ ದೇಶದ ದಂಪತಿಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ಮಗು ದತ್ತು ಕೊಡುವ ಮೂಲಕ ಶುಭ ಹಾರೈಸಿದರು.
ಮಗು ಪಡೆದ ದಂಪತಿಯೂ ಅಷ್ಟೇ ವಿನಮ್ರವಾಗಿ ಕೈಮುಗಿಯುತ್ತಿದ್ದಂತೆ ಒಂದೂವರೆ ವರ್ಷದ ಮಗು ಬಾಯಲ್ಲಿ ಬೆರಳನ್ನಿಟ್ಟುಕೊಂಡು ನಗುತ್ತಿತ್ತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನೇತೃತ್ವದಲ್ಲಿ ಸರ್ಕಾರಿ ವಿಶೇಷ ದತ್ತು ಸಂಸ್ಥೆ ಹಾಗೂ ಶ್ರೀ ಛಾಯಾದೇವಿ ಅನಾಥಾಶ್ರಮದಿಂದ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ನಿಯಮದಂತೆ ಆರು ಮಕ್ಕಳನ್ನು ದತ್ತು ನೀಡಲಾಯಿತು.
ಸರ್ಕಾರಿ ದತ್ತು ಸಂಸ್ಥೆಯಿಂದ ಮೂರು ಮಕ್ಕಳು, ಛಾಯಾದೇವಿ ಅನಾಥಾಶ್ರಮದಿಂದ ಮೂರು ಮಕ್ಕಳನ್ನು ನಿಯಮಾನುಸಾರ ಪೋಷಕರಿಗೆ ಒಪ್ಪಿಸಲಾಯಿತು.
ಪ್ರತಿಯೊಂದು ಕಡತಗಳನ್ನೂ ಪರಿಶೀಲಿಸಿದ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಅವರು, ಒಂದೊಂದು ಮಗುವನ್ನು ಕಾತರದಿಂದ ಕಾದಿದ್ದ ಪೋಷಕರ ಮಡಿಲಿಗೆ ಹಸ್ತಾಂತರ ಮಾಡಿದರು.
ಸ್ಪೇನ್ ದೇಶದಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಾರ್ವಜನಿಕ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ದಂಪತಿಗೆ ಮಕ್ಕಳು ಇರಲಿಲ್ಲ.
ಲಕ್ಷಾಂತರ ರೂಪಾಯಿ ವೇತನ ಬರುತ್ತಿದ್ದರೂ ಮಗು ಇಲ್ಲದೆ ನೊಂದಿದ್ದ ಈ ದಂಪತಿಯು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ವೆಬ್ಸೈಟ್ ವೀಕ್ಷಿಸಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಭಾರತೀಯ ದತ್ತು ಸ್ವೀಕಾರ ಕಾನೂನಿನ ಪ್ರಕಾರ ಸಾಮಾನ್ಯ ಮಕ್ಕಳನ್ನು ದತ್ತು ಕೊಡುವಂತಿಲ್ಲ. ವಿಶೇಷಚೇತನ ಮಗುವನ್ನು ದತ್ತುಕೊಡುವುದಕ್ಕೆ ಅವಕಾಶ ಇರುವುದರ ಬಗ್ಗೆ ತಿಳಿಸಲಾಗಿತ್ತು.
ಇದಕ್ಕೆ ಒಪ್ಪಿದ ದಂಪತಿಯು ಎರಡು ವರ್ಷಗಳಿಂದಲೂ ವಿಶೇಷಚೇತನ ಮಗುವನ್ನು ಪಡೆಯುವ ಸಲುವಾಗಿ ಅದಕ್ಕೆ ಬೇಕಾದ ಪ್ರಕ್ರಿಯೆಗಳನ್ನು ಮುಗಿಸಿದ್ದರು. ಸರ್ಕಾರಿ ಉದ್ಯೋಗದ ಪ್ರಮಾಣಪತ್ರ, ಆಸ್ತಿ ವಿವರ, ಮಗುವನ್ನು ನೋಡಿಕೊಳ್ಳುವ ಹೊಣೆಗಾರಿಕೆ, ವಿಶೇಷ ಮಗುವಾದರೂ ಆರೈಕೆ ಮಾಡುತ್ತೇವೆ ಎಂಬ ಷರತ್ತನ್ನು ಒಪ್ಪಿ ಪೂರೈಸಿದ್ದರು.
ಅದರಂತೆ, ಒಪ್ಪಂದದ ಪತ್ರ, ಅಫಿಡವಿಟ್ ಸಲ್ಲಿಸಿದ್ದರು. ಈ ಅರ್ಜಿಯನ್ನು ಅಂಗೀಕರಿಸಿ ಒಪ್ಪಿಗೆ ಕೊಡಲಾಗಿತ್ತು.ಮೈಸೂರಿಗೆ ಆಗಮಿಸಿದ್ದ ಈ ದಂಪತಿಯು ಛಾಯಾದೇವಿ ಅನಾಥಾಲಯದ ಮುಖ್ಯಸ್ಥರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳನ್ನು ಭೇಟಿ ಮಾಡಿದ್ದರು.
ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತರೆಡ್ಡಿ ಅವರು ಮಗುವನ್ನು ಹಸ್ತಾಂತರ ಮಾಡುತ್ತಿದ್ದಂತೆ ಪೋಷಕರ ಮೊಗದಲ್ಲಿ ಸಂತಸ ಮನೆ ಮಾಡಿತು.ಮಗು ವನ್ನು ಮುದ್ದಾಡಿ ಸಂಭ್ರಮಿಸಿದರು.
ಇದುವರೆಗೂ ಛಾಯಾದೇವಿ ಅನಾಥಾಲಯ ಸಂಸ್ಥೆಯ ಪೋಷಕರ ಆಶ್ರಯದಲ್ಲಿ ಬೆಳೆದಿದ್ದ ಮಗು ಹೊಸ ತಂದೆ-ತಾಯಿ ಕೈಗೆ ಸೇರುತ್ತಿದ್ದಂತೆ ಖುಷಿ ಪಟ್ಟಿತು.
ಕಳೆದ ಮೂರು ವರ್ಷಗಳಿಂದ ಮೈಸೂರಿನಿಂದ ಆರು ಮಕ್ಕಳನ್ನು ವಿದೇಶಕ್ಕೆ ದತ್ತು ನೀಡಲಾಗಿದೆ. ವಿದೇಶದಲ್ಲಿ ಇದ್ದರೂ ಮಗುವಿನ ದತ್ತು ಸ್ವೀಕಾರಕ್ಕೆ ಅವಕಾಶ ನೀಡಿರುವುದರಿಂದ ಮಕ್ಕಳಿಲ್ಲದ ದಂಪತಿ ದತ್ತು ಸ್ವೀಕರಿಸುತ್ತಿದ್ದು, ಮೂರು ವರ್ಷಗಳಲ್ಲಿ ಆರು ಮಕ್ಕಳನ್ನು ದತ್ತು ಕೊಡಲಾಗಿದೆ.
ಅಮೆರಿಕ-೨, ಇಟಲಿ-೧, ಕೆನಡಾ-೧,ಹಾಂಕಾಂಗ್-೧, ದುಬೈಗೆ ಒಂದು ಮಗುವನ್ನು ಕೊಡಲಾಗಿದೆ. ಇವರೆಲ್ಲರೂ ವಿಶೇಷಚೇತನ ಮಕ್ಕಳಾಗಿದ್ದಾರೆ.
