ಮೈಸೂರು: ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆ ನಡೆಯುತ್ತಿರುವ ವೇಳೆ ಕಲ್ಲು ಮತ್ತು ಚಪ್ಪಲಿ ತೂರಾಟ ನಡೆಸಿರುವುದು ಕೇವಲ ಒಂದು ಅಹಿತಕರ ಘಟನೆಯಲ್ಲ,ಅದು ರಾಜ್ಯದ ಕಾನೂನು ಸುವ್ಯವಸ್ಥೆಯ ಸಂಪೂರ್ಣ ವೈಫಲ್ಯ ಎಂದು ಬಿಜೆಪಿ ಮುಖಂಡರಾದ ಡಾ. ಹೇಮಾ ನಂದೀಶ್ ದೂರಿದ್ದಾರೆ.
ಈ ಘಟನೆಯ ಹಿಂದೆ ಕಾಂಗ್ರೆಸ್ ಸರ್ಕಾರದ ಅತಿಯಾದ ಓಲೈಕೆ ರಾಜಕಾರಣ ಎದ್ದು ಕಾಣುತ್ತಿದ್ದು, ಒಂದು ವರ್ಗವನ್ನು ಸಮಾಧಾನಪಡಿಸುವ ಭರದಲ್ಲಿ ಸಮಾಜಘಾತಕ ಶಕ್ತಿಗಳಿಗೆ ಮಣೆ ಹಾಕುತ್ತಿರುವುದು ದುರದೃಷ್ಟಕರ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.
ಹಿಂದುಗಳ ಧಾರ್ಮಿಕ ಭಾವನೆಗಳು ಮತ್ತು ರಾಷ್ಟ್ರ ಪುರುಷರ ಅಸ್ಥಿತೆಯ ಮೇಲೆ ಪದೇ ಪದೇ ಇಂತಹ ದಾಳಿಗಳು ನಡೆಯುತ್ತಿದ್ದರೂ, ಸರ್ಕಾರ ಕಣ್ಣುಮುಚ್ಚಿ ಕುಳಿತಿರುವುದು ದುಷ್ಕರ್ಮಿಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿದಂತಿದೆ ಎಂದಿದ್ದಾರೆ.
ಹಿಂದೂ ಸಮಾಜವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಸರಣಿ ಘಟನೆಗಳನ್ನು ಹತ್ತಿಕ್ಕುವ ಬದಲು, ಅಪರಾಧಿಗಳ ವಿರುದ್ಧ ಮೃದು ಧೋರಣೆ ತಳೆಯುತ್ತಿರುವ ಸರ್ಕಾರದ ನಿಲುವು ಖಂಡನೀಯ ಎಂದು ಹೇಮಾ ನಂದೀಶ್ ತಿಳಿಸಿದ್ದಾರೆ.
