ಮೈಸೂರು: ಮಾನವ-ಹುಲಿ ಸಂಘರ್ಷದ ಹಿನ್ನೆಲೆಯಲ್ಲಿ ಕಳೆದ ನವೆಂಬರ್ 7ರಂದು ಸ್ಥಗಿತಗೊಂಡಿದ್ದ ಸಫಾರಿಯನ್ನು ಫೆ.21ರಿಂದ ಷರತ್ತು ಬದ್ಧವಾಗಿ ಪುನಾರಂಭಿಸಲಾಗುತ್ತಿದೆ.
ಈ ಷರತ್ತುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ್ದಾರೆ.
ಮೈಸೂರಿನಲ್ಲಿ ಮೈಸೂರು, ಕೊಡಗು ಮತ್ತು ಚಾಮರಾಜನಗರ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಬಹುತೇಕ ಶನಿವಾರದಿಂದ ಸಫಾರಿ ಆರಂಭಿಸಲು ಅಧಿಕೃತ ಆದೇಶ ಹೊರಡಿಸಲಾಗುವುದು. ಈ ಆದೇಶದಲ್ಲಿರುವ ಷರತ್ತುಗಳ ಉಲ್ಲಂಘನೆ ಆದರೆ, ಸಂಬಂಧಿತ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ನ.7ಕ್ಕೆ ಮೊದಲು ಬಳಕೆಯಾಗುತ್ತಿದ್ದ ಸಫಾರಿ ವಾಹನಗಳ ಶೇ.50ರಷ್ಟು ವಾಹನ ಮತ್ತು ಸಿಬ್ಬಂದಿಯನ್ನು ಮಾತ್ರವೇ ಬಳಕೆ ಮಾಡಬೇಕು. ಹೆಚ್ಚಾಗಿ ಬಸ್ ಗಳ ಮೂಲಕ ಸಫಾರಿ ನಡೆಸಬೇಕು. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕ್ಯಾಂಪರ್ ಮತ್ತು ಜೀಪ್ ಬಳಕೆ ಮಾಡಬೇಕಿದೆ, ಈ ಬಗ್ಗೆ ಸ್ಪಷ್ಟ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ಬಂಡಿಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಇರುವ ಪ್ರದೇಶವನ್ನು ಗುರುತಿಸಬೇಕು. ಆ ಪ್ರದೇಶದಲ್ಲಿ ಗಸ್ತು ಹೆಚ್ಚಸಬೇಕು. ವನ್ಯಜೀವಿಗಳು ವಸತಿ ಪ್ರದೇಶಕ್ಕೆ ಬಾರದಂತೆ, ಜೀವಹಾನಿ, ಬೆಳೆ ಹಾನಿ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಬಂಡೀಪುರ ಅರಣ್ಯದ ಗಡಿಯಲ್ಲಿ 100 ಕಿ.ಲೋ. ಮೀಟರ್ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ 5 ಕಿ.ಮೀ.ಗೆ ಒಂದರಂತೆ 25 ಶಿಬಿರ ನಿರ್ಮಿಸಿ ಪ್ರತಿ ಶಿಬಿರದಲ್ಲಿ ಸ್ಥಳೀಯರನ್ನು ಕಾಡಿನ ಮಿತ್ರ ಎಂದು ನೇಮಕ ಮಾಡಿಕೊಂಡು ವನ್ಯಜೀವಿಗಳ ಚಲನವಲನದ ಬಗ್ಗೆ ನಿಗಾ ಇಡಬೇಕು. ಥರ್ಮಲ್ ಡ್ರೋನ್, ವಾಹನ ಇತ್ಯಾದಿ ಯಾವುದೇ ಸೌಲಭ್ಯ ಬೇಕಿದ್ದರೂ ಲಿಖಿತ ಮೂಲಕ ಪ್ರಸ್ತಾವನೆ ಸಲ್ಲಿಸಿ ಎಂದು ಖಂಡ್ರೆ ಸೂಚಿಸಿದರು.
ವನ್ಯಜೀವಿಗಳ ರಕ್ಷಣೆಯ ಜೊತೆಗೆ ಕಾಡಿನಂಚಿನಲ್ಲಿ ವಾಸಿಸುತ್ತಿರುವ ನಿವಾಸಿಗಳ ಜೀವ ರಕ್ಷಣೆಯೂ ಅರಣ್ಯ ಇಲಾಖೆಯ ಪ್ರಥಮ ಆದ್ಯತೆ ಆಗಿದೆ. ಇದರ ಜೊತೆಗೆ ಬೆಳೆ ರಕ್ಷಣೆಗೂ ಒತ್ತು ನೀಡಬೇಕು ಎಂದು ಸಚಿವರು ಹೇಳಿದರು.
ಇಲಾಖೆಯ ಕಾಯಂ ಸಿಬ್ಬಂದಿ ಕಡ್ಡಾಯವಾಗಿ ಅರಣ್ಯ ಇಲಾಖೆ ಆಂತರಿಕವಾಗಿ ಅಭಿವೃದ್ಧಿಪಡಿಸಿರುವ ಇ-ಗಸ್ತು ತಂತ್ರಾಂಶವನ್ನು ಬಳಕೆ ಮಾಡಬೇಕು. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೊರಗುತ್ತಿಗೆಯ ಸಿಬ್ಬಂದಿ ಇ-ಸ್ಟ್ರೈಪ್ ಬಳಕೆ ಮಾಡಲಿ ಎಂದು ತಿಳಿಸಿದರು.
ನಾಗರಹೊಳೆ, ಬಂಡೀಪುರ, ಬಿ.ಆರ್.ಟಿಯಲ್ಲಿ ಬೇಸಿಗೆಯಲ್ಲಿ ಕಾಡ್ಗಿಚ್ಚು ನಿಯಂತ್ರಿಸಲು ಈಗಿನಿಂದಲೇ ಕ್ರಮ ವಹಿಸುವಂತೆ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.
