ಮೈಸೂರು: ನಂಜನಗೂಡು ಪಟ್ಟಣದಲ್ಲಿರುವ ಸರ್ಕಾರಿ ತಾಯಿ-ಮಕ್ಕಳ ಆಸ್ಪತ್ರೆಗೆ ತಡರಾತ್ರಿ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಅವರು ದಿಢೀರ್ ಭೇಟಿ ನೀಡಿ, ಪರಿಶೀಲಿಸಿದರು.
ನಂಜನಗೂಡು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಳೆದ ತಡರಾತ್ರಿ ದರ್ಶನ್ ದೃವನಾರಾಯಣ್ ಒಬ್ಬರೇ ದಿಢೀರ್ ಭೇಟಿ ನೀಡಿ ಆಸ್ಪತ್ರೆಯಲ್ಲಿನ ವ್ಯವಸ್ಥೆಗಳನ್ನು ವೀಕ್ಷಿಸಿದರು.
ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಹಾಗೂ ಸಿಬ್ಬಂದಿಯ ಹಾಜರಾತಿ, ತುರ್ತು ಚಿಕಿತ್ಸಾ ವಿಭಾಗದ ಕಾರ್ಯವೈಖರಿ, ಸ್ವಚ್ಛತೆ ಮತ್ತು ರೋಗಿಗಳಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿದರು.
ಇದೇ ವೇಳೆ ರೋಗಿಗಳು ಹಾಗೂ ಅವರ ಸಂಬಂಧಿಕರೊಂದಿಗೆ ಮಾತುಕತೆ ನಡೆಸಿ ಚಿಕಿತ್ಸೆ, ಔಷಧಿ ಲಭ್ಯತೆ ಮತ್ತು ಮೂಲಭೂತ ಸೌಕರ್ಯ ಕುರಿತು ಮಾಹಿತಿ ಪಡೆದರು.
ಯಾವುದೇ ಸಮಯದಲ್ಲಾಗಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಆಗಮಿಸುವ ತಾಯಿ ಮತ್ತು ಮಕ್ಕಳಿಗೆ ಯಾವುದೇ ತೊಂದರೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
