ನಂಜನಗೂಡು: ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭ ವಿಜೃಂಭಣೆಯಿಂದ ನೆರವೇರಿತು.
ಶಿಕ್ಷಣ, ಸಂಸ್ಕೃತಿ ಮತ್ತು ಮೌಲ್ಯಾಧಾರಿತ ಜೀವನದ ಮಹತ್ವವನ್ನು ಸಾರುವ ಉದ್ದೇಶದಿಂದ ಆಯೋಜಿಸಲಾದ ಈ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು, ಪೋಷಕರು ಹಾಗೂ ಗಣ್ಯರು ಭಾಗವಹಿಸಿದ್ದರು.
ಸಮಾರಂಭವನ್ನು ಉದ್ಘಾಟಿಸಿದ ಮೈಸೂರು ಜಿಲ್ಲೆಯ ಉಪನಿರ್ದೇಶಕರಾದ ಎಂ.ಪಿ ನಾಗಮ್ಮ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗದೆ ಸಮಗ್ರ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಂ.ಎಸ್ ರಾಮ ಪ್ರಸಾದ್ ಅವರು ಮಾತನಾಡಿ, ಶಿಕ್ಷಣವು ಉದ್ಯೋಗಕ್ಕೆ ಮಾತ್ರವಲ್ಲದೆ ಸಮಾಜದ ಹೊಣೆಗಾರಿಕೆಯ ಅರಿವನ್ನು ಮೂಡಿಸಬೇಕು,
ಶಿಸ್ತು, ನೈತಿಕತೆ ಮತ್ತು ಪರಿಶ್ರಮ ಜೀವನದ ಯಶಸ್ಸಿಗೆ ಮೂಲ ಮಂತ್ರಗಳಾಗಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್.ದಿನೇಶ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕಾದರೆ ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಸಮಾರೋಪ ಭಾಷಣ ಮಾಡಿದ ಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ ಟಿ ಕೃಷ್ಣೇಗೌಡ ಅವರು ಮಾತನಾಡಿ, ತಂತ್ರಜ್ಞಾನ ಯುಗದಲ್ಲಿ ಹೊಸ ಕೌಶಲ್ಯಗಳನ್ನು ಕಲಿಯುವ ಅಗತ್ಯವಿದೆ ಎಂದು ಒತ್ತಿಹೇಳಿದರು.
ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯ ಎಂದು ಹೇಳಿದರು.
ಸಮಾರಂಭದ ಅಂಗವಾಗಿ ವರ್ಷದ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳು, ಪ್ರಶಂಸಾಪತ್ರಗಳು ಹಾಗೂ ಪದಕಗಳನ್ನು ವಿತರಿಸಲಾಯಿತು.
ಕ್ರೀಡೆ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಗೀತೆಗಳು, ನೃತ್ಯ, ಸಮೂಹ ಗಾನ ಹಾಗೂ ನಾಟಕ ಪ್ರದರ್ಶನಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಡಾ.ಕೆ.ಮಾಲತಿ ಸ್ವಾಗತಿಸಿದರು, ಕಾಲೇಜಿನ ವಾರ್ಷಿಕ ವರದಿಯನ್ನು ಭವ್ಯ ಬಿ ಮಂಡಿಸಿದರು,ಲಿಂಗಣ್ಣಸ್ವಾಮಿ ಅವರು ವಂದನಾರ್ಪಣೆ ಮಾಡಿದರೆ, ಕಾರ್ಯಕ್ರಮವನ್ನು ಹೆಚ್.ಕೆ.ಪ್ರಕಾಶ್ ನಿರೂಪಿಸಿದರು.
