ಮೈಸೂರು: ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ ಸಿಬ್ಬಂದಿಗೆ ರೈಲ್ವೆ ಮುಂಬಡ್ತಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ನಡೆಸಬೇಕು ಎಂದು ಕರ್ನಾಟಕ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.
ಕರ್ನಾಟಕ ಹಿತರಕ್ಷಣಾ ವೇದಿಕೆ
ವತಿಯಿಂದ ಶನಿವಾರ ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಶಿವರಾಜ್ ಅವರಿಗೆ
ನಮ್ಮ ರಾಜ್ಯದ ಸಿಬ್ಬಂದಿಗೆ ರೈಲ್ವೆ ಮುಂಬಡ್ತಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ನಡೆಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ರೈಲ್ವೆ ಇಲಾಖೆಯ ಗ್ರೂಪ್ ಸಿ ಹಾಗೂ ಗ್ರೂಪ್ ಡಿ ಪರೀಕ್ಷೆಗಳನ್ನು ಪ್ರಥಮ ಹಂತದಲ್ಲಿ ಕನ್ನಡದಲ್ಲಿಯೇ ನಡೆಸಲಾಗುತ್ತದೆ, ಆಯ್ಕೆಯಾದ ನಂತರ ಮುಂಭಡ್ತಿಗೆ ಸಂಬಂಧಿಸಿದ ಇಲಾಖಾವಾರು ಆಂತರಿಕ ಪರೀಕ್ಷೆಯನ್ನು ಹಿಂದಿ ಇಂಗ್ಲಿಷ್ ಭಾಷೆಯಲ್ಲಿ ನಡೆಸುವ ಮೂಲಕ ಕನ್ನಡಿಗರನ್ನು ಮುಂಬಡ್ತಿಯಿಂದ ವಂಚಿಸಲಾಗುತ್ತಿದೆ ಎಂದು ಸಂಘಟನೆಯವರು ಮನವಿ ಸಲ್ಲಿಸುವ ಮೂಲಕ ಸರ್ಕರಗಳ ಗಮನ ಸೆಳೆದಿದ್ದಾರೆ.
ಅಧಿಕಾರಿಗಳು ರಾಜ್ಯದ ಸಿಬ್ಬಂದಿಗೆ ಮುಂಬಡ್ತಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ನಡೆಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಮನವಿ ಸಲ್ಲಿಸಿದ ನಂತರ ಮಾತನಾಡಿದ ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ರೈಲ್ವೆ ಇಲಾಖೆಯು ಉದ್ಯೋಗದ ವಿಚಾರದಲ್ಲಿ ಮೊದಲಿನಿಂದಲೂ ಕನ್ನಡಿಗರನ್ನು ವಂಚಿಸುತ್ತಾ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನೇಮಕಾತಿ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ನಡೆಸುವ ಮೂಲಕ ಉನ್ನತ ಹುದ್ದೆಗಳನ್ನು ಕನ್ನಡಿಗರಿಗೆ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.
ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಕನ್ನಡಿಗರನ್ನು ಅವಮಾನ ಮಾಡುವುದು ತಪ್ಪಿಲ್ಲ, ನಮ್ಮ ಮಾತೃಭಾಷೆಯಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆ ಬರೆಯುವ ಹಕ್ಕನ್ನು ಕೇಂದ್ರ ಸರ್ಕಾರವೇ ಕಿತ್ತುಕೊಳ್ಳುತ್ತಿದೆ ಕನ್ನಡಿಗರಾದ ವಿ ಸೋಮಣ್ಣ ಅವರೇ ರೈಲ್ವೆ ಖಾತೆ ರಾಜ್ಯ ಸಚಿವರಾದರೂ ಈ ಅನ್ಯಾಯ ತಪ್ಪಿಲ್ಲ ಎಂದು ವಿನಯ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಎಸ್.ಎನ್ ರಾಜೇಶ್, ಲೋಕೇಶ್, ಈಶ್ವರ್, ರವಿಚಂದ್ರ, ಯತೀಂದ್ರ,ರಾಕೇಶ್, ಅಮಿತ್ ಮತ್ತಿತರರು ಹಾಜರಿದ್ದರು.
