ಇಸ್ಲಾಮಾಬಾದ್: ಟೀಂ ಇಂಡಿಯಾ ವಿರುದ್ಧ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯ ಆಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶೆಹಾಬಾಜ್ ಷರೀಫ್ ಹೇಳಿದ್ದಾರೆ.
ಇಸ್ಲಾಮಾಬಾದ್ ನ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಶೆಹಾಬಾಜ್ ಷರೀಫ್, ಟಿ 20 ವಿಶ್ವಕಪ್ಗೆ ಸಂಬಂಧಿಸಿದಂತೆ ನಾವು ಭಾರತದ ವಿರುದ್ಧ ಪಂದ್ಯ ಆಡುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಕ್ರೀಡೆಯಲ್ಲಿ ಯಾವುದೇ ರಾಜಕೀಯ ಇರಬಾರದು; ಇದು ನಮ್ಮ ಸ್ಪಷ್ಟ ನಿಲುವು. ಎಚ್ಚರಿಕೆಯಿಂದ ಚರ್ಚಿಸಿದ ನಂತರ ನಾವು ಈ ನಿಲುವನ್ನು ತೆಗೆದುಕೊಂಡಿದ್ದೇವೆ. ನಾವು ಬಾಂಗ್ಲಾದೇಶದೊಂದಿಗೆ ಇದ್ದೇವೆ ಮತ್ತು ಇದು ಸರಿಯಾದ ನಿರ್ಧಾರ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಭದ್ರತಾ ಕಾರಣ ನೀಡಿ ಬಾಂಗ್ಲಾದೇಶ ಭಾರತಕ್ಕೆ ಬರುವುದಿಲ್ಲ,ಶ್ರೀಲಂಕಾದಲ್ಲಿ ಟೂರ್ನಿ ಆಡಿಸುವಂತೆ ಬೇಡಿಕೆ ಇಟ್ಟಿತ್ತು. ಬಾಂಗ್ಲಾದ ಈ ನಿಲುವಿಗೆ ಪಾಕ್ ಬೆಂಬಲ ವ್ಯಕ್ತಪಡಿಸಿತ್ತು. ಆದರೆ ಐಸಿಸಿ ಬಾಂಗ್ಲಾದ ಬೇಡಿಕೆಯನ್ನು ತಿರಸ್ಕರಿಸಿತ್ತು.
ಫೆಬ್ರವರಿ 15 ರಂದು ಕೊಲಂಬೋದಲ್ಲಿರುವ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ, ಪಾಕಿಸ್ತಾನ ಪಂದ್ಯ ನಿಗದಿಯಾಗಿತ್ತು.ಆದರೆ ಪಾಕ್ ಪ್ರಧಾನಿಯೇ ಟೀಂ ಇಂಡಿಯಾ ವಿರುದ್ಧ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯ ಆಡುವುದಿಲ್ಲ ಎಂದು ಹೇಳಿರುವುದರಿಂದ ಮುಂದೇನು ಎಂಬುದನ್ನು ಕಾದು ನೋಡಬೇಕಿದೆ.
