ಬೆಂಗಳೂರು: ಬೆಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 4 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿ ಕೊಂಡಿದ್ದಾರೆ.
ಡ್ರಗ್ಸ್ ಸಾಗಣೆ ಮಾಡುತ್ತಿದ್ದ ಕೇರಳ ಮೂಲದ 7 ಮಂದಿ ಸೇರಿ ಒಟ್ಟು 10 ಆರೋಪಿಗಳನ್ನು
ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 3 ಕೆಜಿ ಹೈಡ್ರೋ ಗಾಂಜಾ, 50 ಗ್ರಾಂ ಎಂಡಿಎಂಎ ಮತ್ತು ಚರಸ್, 500 LSD ಸ್ಟ್ರಿಪ್ಸ್, 10 ಕೆಜಿ ಗಾಂಜಾ, 2 ಕಾರು, 14 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ.
ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಮಾಹಿತಿ ನೀಡಿದ್ದು, ಬೆಂಗಳೂರಿನಲ್ಲಿ 4 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಜ.19ರ ಮಧ್ಯಾಹ್ನ ಜಕ್ಕೂರು ರೈಲ್ವೆ ಟ್ರ್ಯಾಕ್ ಬಳಿ ಡ್ರಗ್ಸ್ ಪತ್ತೆಯಾಗಿತ್ತು. ಜ.21ರಂದು ಜಿಕೆವಿಕೆ ಮೈದಾನದಲ್ಲಿ 2 ಕೆಜಿ ಹೈಡ್ರೋ ಗಾಂಜಾ ಸೀಜ್ ಮಾಡಲಾಗಿದೆ ಎಂದು ತಿಳಿಸಿದರು.
ಮೈಸೂರು ರಸ್ತೆ ಸ್ಯಾಟಲೈಟ್ ನಿಲ್ದಾಣ ಬಳಿ 2 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. 500 ಎಲ್ಎಸ್ಡಿ ಸ್ಟ್ರಿಪ್ಸ್ ವಶಕ್ಕೆ ಪಡೆಯಲಾಗಿದೆ. 10 ಆರೋಪಿಗಳನ್ನು ಬಂಧಿಸಿ ಅಮೃತಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
