ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೆ ದಿನೇ ದರೋಡೆ,ಲೂಟಿ ಪ್ರಕರಣಗಳು ಹೆಚ್ಚುತ್ತಲೇ ಇದ್ದು ಬೆಂಗಳೂರಿಗರು ಆತಂಕಕ್ಕೆ ಒಳಗಾಗಿದ್ದಾರೆ.
ಮತ್ತೊಂದು ಪ್ರಕರಣ ಮಾರತ್ತಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರಿನ ಮಾರತ್ತಹಳ್ಳಿಯ ಬಿಲ್ಡರ್ ಮನೆಯಲ್ಲಿ ಸುಮಾತು 18 ಕೋಟಿ ರೂ. ಮೌಲ್ಯದ ಆಭರಣ ದೋಚಲಾಗಿದೆ.
20 ದಿನಗಳ ಹಿಂದೆ ಕೆಲಸಕ್ಕೆ ಸೇರಿದ್ದ ನೇಪಾಳಿ ದಂಪತಿ ಈ ಕಳ್ಳತನ ಮಾಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಲಾಕರ್ಗಳನ್ನು ಮುರಿದು 11.5 ಕೆ.ಜಿ ಚಿನ್ನ ಮತ್ತು ವಜ್ರ ಹಾಗೂ 5 ಕೆ.ಜಿ ಬೆಳ್ಳಿ ದೋಚಿದ್ದಾರೆ.
ಯಮಲೂರಿನ ಬಿಲ್ಡರ್ ಶಿವಕುಮಾರ್ ಮನೆಯಲ್ಲಿ ಈ ಭಾರೀ ಕಳ್ಳತನ ನಡೆದಿದ್ದು, 20 ದಿನದ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ದಂಪತಿ ದಿನೇಶ್ ಮತ್ತು ಕಮಲಾ ಎಂಬವರು ಚಿನ್ನಾಭರಣ ದೋಚಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ.
ಉದ್ಯಮಿ ಶಿವಕುಮಾರ್ ಮನೆಯಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ದಂಪತಿ ಸೇರಿದ್ದರು. ಜನವರಿ 25ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೆಲಮಹಡಿ, ಮೊದಲ ಮಹಡಿಯ ಬೆಡ್ ರೂಂಗಳ ಲಾಕರ್ ಮುರಿದು ಕಳ್ಳತನ ನಡೆಸಿದ್ದಾರೆ.
ಮನೆಯ ಇತರೆ ಕೆಲಸಗಾರರು ನೋಡಿದಾಗ ಕೃತ್ಯ ಗೊತ್ತಾಗಿ,ಫೋನ್ ಮಾಡಿ ಮನೆಯವರಿಗೆ ವಿಷಯ ತಿಳಿಸಿದ್ದಾರೆ.
ಉದ್ಯಮಿ ಮನೆಯವರು ಬಂದು ಪರೀಕ್ಷಿಸಿದಾಗ ಲಾಕರ್ಗಳನ್ನು ಮುರಿದು ಕಳವು ಮಾಡಿರೋದು ಗೊತ್ತಾಗಿದೆ.
ಮಾರತ್ತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
